ಲಸಿಕೆ ಪಡೆದರೂ ಕೋವಿಡ್ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅವಶ್ಯಕ: ಡಾ. ವಾಸುದೇವ ಉಪಾಧ್ಯ

ಉಡುಪಿ: ಕೊರೊನಾ ಸೋಂಕು ಬಾರದಂತೆ ಕೋವಿಡ್ ಲಸಿಕೆ ಪಡೆದರೂ ಸರಕಾರ ಸೂಚಿಸಿದ ಕೋವಿಡ್ ನಿಬಂಧನೆಗಳ ಪಾಲನೆ ಅತ್ಯಂತ ಅವಶ್ಯಕ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ವಾಸುದೇವ ಉಪಾಧ್ಯ ಹೇಳಿದರು.

ಕೇಂದ್ರ ಸರಕಾರ ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ವಿಶೇಷ ಕಾಳಜಿ ವಹಿಸಿ ಉಚಿತವಾಗಿ ಲಸಿಕೆ ವಿತರಣೆಯನ್ನು ಹಂತ ಹಂತವಾಗಿ ಆಯೋಜಿಸುತ್ತಿದೆ. ಸಾರ್ವಜನಿಕರು ಹಾಗೂ ಕಾರ್ಮಿಕ ವರ್ಗ ಇದರ ಪ್ರಯೋಜನವನ್ನು ಪಡೆಯಬೇಕು ಎಂದು ಅವರು ಹೇಳಿದರು.

ಅವರು ಗುರುವಾರ ಉಡುಪಿ ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ಜಿಲ್ಲಾ ಅರೋಗ್ಯ ಇಲಾಖೆ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಉಡುಪಿ ವಲಯ ಇವರ ಆಶ್ರಯದಲ್ಲಿ ಆಯೋಜಿಸಿದ ಗ್ಯಾರೇಜ್ ಕಾರ್ಮಿಕರಿಗಾಗಿ ಉಚಿತ ಲಸಿಕೆ ವಿತರಣಾ ಶಿಬಿರಕ್ಕೆ ಭೇಟಿ ನೀಡಿ ಮಾತನಾಡಿದರು.

ಬಿಲ್ಲವ ಸೇವಾ ಸಂಘ ಬನ್ನಂಜೆ ಇದರ ಅಧ್ಯಕ್ಷ ಆನಂದ್ ಪೂಜಾರಿ ಕಿದಿಯೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ರೋಷನ್ ಕರ್ಕಡ ಕಾಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ ಇದರ ವೈದ್ಯಾಧಿಕಾರಿ ಡಾ.ಹೇಮಂತ್ ಭಟ್, ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಮಾಜಿ ಉಪಾಧ್ಯಕ್ಷ ಉದಯಕಿರಣ್, ಸಂಘದ ಹಿರಿಯ ಸಲಹೆಗಾರರಾದ ವಿಲ್ಸನ್ ಅಂಚನ್, ಪ್ರಭಾಕರ್ ಕೆ, ಪದಾಧಿಕಾರಿಗಳಾದ ರಾಜೇಶ್ ಜತ್ತನ್, ವಿನಯಕುಮಾರ್, ಸಂತೋಷ್ ಕುಮಾರ್, ಪ್ರಶಾಂತ್ ಮೆಂಡನ್, ರವೀಂದ್ರ ಶೇಟ್, ವಿಜಯ್ ಸನಿಲ್, ಮಧುಸೂದನ್ ಕನ್ನರ್ಪಾಡಿ, ಸಿಲ್ವಸ್ಟರ್ ಡಿಸೋಜ, ಸಂತೋಷ್ ಕಾಪು, ದಯಾನಂದ್ ಬನ್ನಂಜೆ, ಧೀರಜ್ ಆರ್ ಕೋಟ್ಯಾನ್, ಸಾಮಾಜಿಕ ಕಾರ್ಯಕರ್ತ ನಾಗರಾಜ್ ಶೇಟ್ ಉಪಸ್ಥಿತರಿದ್ದರು. ನಗರಸಭೆಯ ಸದಸ್ಯರೂ ಆಗಿರುವ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ಕಾರ್ಯಕ್ರಮ ಸಂಘಟಿಸಿ ನಿರೂಪಿಸಿದರು.