ಕಾರ್ಕಳ: ಸಾಲ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ಖಾತೆಯಿಂದ ₹ 2.36 ಲಕ್ಷ ಲಪಟಾಯಿಸಿದ ಘಟನೆ ಕಾರ್ಕಳದ ಮುಂಡ್ಕೂರು ಎಂಬಲ್ಲಿ ನಡೆದಿದೆ.
ಕಾರ್ಕಳದ ಮುಂಡ್ಕೂರು ನಿವಾಸಿ ಸಿರಾಜ್ (26) ಹಣ ಕಳೆದುಕೊಂಡ ವ್ಯಕ್ತಿ. ಇವರು ಆನ್ ಲೈನ್ನಲ್ಲಿ ಸಾಲ ಪಡೆಯುವ ಉದ್ದೇಶದಿಂದ ಗೂಗಲ್ ನ ಲೋನ್ ಆ್ಯಪ್ ನಲ್ಲಿ ಹೆಸರು ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿದ್ದರು.
ಅದಾದ ಮೂರು ದಿನಗಳ ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದು, ತಾನು ಮುದ್ರಾ ಲೋನ್ನಿಂದ ಮಾತನಾಡುವುದಾಗಿ ನಂಬಿಸಿ ಸಾಲದ ಟ್ಯಾಕ್ಸ್ ಕಟ್ಟುವಂತೆ ಹೇಳಿ ಹಂತ ಹಂತವಾಗಿ ₹1,97,400 ರೂಪಾಯಿಗಳನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದನು.
ಸ್ವಲ್ಪ ದಿನಗಳ ನಂತರ ಇನ್ನೊಬ್ಬ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದು, ಆತನೂ ಸಾಲ ಕೊಡಿಸುವುದಾಗಿ ಹೇಳಿದ್ದನು. ಅಲ್ಲದೆ, ಮೊದಲು ಕಳೆದುಕೊಂಡ ಹಣವನ್ನು ಹಿಂದಿರುಗಿಸಿ ಕೊಡುವುದಾಗಿ ನಂಬಿಸಿ ಹಂತ ಹಂತವಾಗಿ ಒಟ್ಟು ₹ 39,300 ರೂಪಾಯಿಗಳನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದನು.
ಹೀಗೆ ಜೂನ್ 25ರಿಂದ ಜುಲೈ 17ರ ಮಧ್ಯೆ ಸಿರಾಜ್ ಖಾತೆಯಿಂದ ಖದೀಮರು ಒಟ್ಟು 2,36,700/- ರೂಪಾಯಿಗಳನ್ನು ಲಪಟಾಯಿಸಿದ್ದಾರೆ. ಬಳಿಕ ಸಾಲವನ್ನು ಕೊಡಿಸದೆ, ಕಟ್ಟಿದ ಹಣವನ್ನು ಹಿಂದಿರುಗಿಸದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.












