ದೆಹಲಿ: ಹೊಸ ಅಡುಗೆ ಅನಿಲ ಸಂಪರ್ಕವನ್ನು ಪಡೆಯುವ ಸುಲಭ ವಿಧಾನವನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಪರಿಚಯಿಸಿದೆ. ಅದೇನೆಂದರೆ ಇದೀಗ 84549 55555 ಗೆ ಮಿಸ್ಡ್ಕಾಲ್ ಕೊಟ್ಟರೆ ಹೊಸ ಅಡುಗೆ ಅನಿಲ (ಎಲ್ಪಿಜಿ) ಸಂಪರ್ಕ ಪಡೆಯಬಹುದಾಗಿದೆ.
ಅಲ್ಲದೆ, ಈಗಾಗಲೇ ಸಂಪರ್ಕ ಪಡೆದಿರುವ ಗ್ರಾಹಕರು ತಮ್ಮ ನೋಂದಾಯಿತ ಫೋನ್ನಿಂದ ಮಿಸ್ಡ್ ಕಾಲ್ ನೀಡುವ ಮೂಲಕ ಎಲ್ಪಿಜಿ ರೀಫಿಲ್ ಬುಕ್ ಸಹ ಮಾಡಬಹುದು.
ದೇಶದ ಯಾವುದೇ ಭಾಗದಲ್ಲಿ ಹೊಸ ಎಲ್ಪಿಜಿ ಸಂಪರ್ಕವನ್ನು ಪಡೆಯಲು ಅನುಕೂಲವಾಗುವ ‘ಮಿಸ್ಡ್ ಕಾಲ್ ಸೌಲಭ್ಯ’ಕ್ಕೆ ಐಒಸಿ ಸೋಮವಾರ ಚಾಲನೆ ನೀಡಿದೆ. ಗ್ರಾಹಕರ ಮನೆ ಬಾಗಿಲಿಗೆ ‘ಡಬಲ್ ಬಾಟಲ್ ಸಂಪರ್ಕ’(ಡಿಬಿಸಿ– ಎರಡು ಸಿಲಿಂಡರ್ಗಳ) ಒದಗಿಸುವ ಸೌಲಭ್ಯಕ್ಕೂ ಇದೇ ವೇಳೆ ಚಾಲನೆ ನೀಡಲಾಗಿದ್ದು, ಈ ಮೂಲಕ ಈಗಾಗಲೇ ಅಸ್ತಿತ್ವದಲ್ಲಿರುವ ಸಿಂಗಲ್ ಬಾಟಲ್ ಸಂಪರ್ಕಗಳನ್ನು (SBC) ಡಿಬಿಸಿಗೆ ಪರಿವರ್ತಿಸಲಾಗುತ್ತದೆ.
ಆಸಕ್ತ ಗ್ರಾಹಕರು ಈಗಿನ 14.2 ಕೆ.ಜಿ ಸಿಲಿಂಡರ್ ಬದಲಿಗೆ 5 ಕೆ.ಜಿ ಸಿಲಿಂಡರ್ ಅನ್ನು ಬ್ಯಾಕಪ್ ಆಗಿ ಆಯ್ಕೆ ಮಾಡಿಕೊಳ್ಳಲೂ ಸಂಸ್ಥೆ ಅವಕಾಶ ನೀಡಿದೆ.
ಗ್ರಾಹಕರು ‘ಭಾರತ್ ಬಿಲ್ ಪೇ’(ಬಿಬಿಪಿಎಸ್), ‘ಇಂಡಿಯನ್ ಆಯಿಲ್ ಒನ್ ಆ್ಯಪ್’, ಅಥವಾ https://cx.indianoil.in ಮೂಲಕ ಎಲ್ಪಿಜಿ ರೀಫಿಲ್ ಬುಕ್ ಅಥವಾ ಪಾವತಿ ಮಾಡಬಹುದು.
ಅಲ್ಲದೆ, ಗ್ರಾಹಕರು ವಾಟ್ಸಾಪ್ (7588888824), ಎಸ್ಎಂಎಸ್/ಐವಿಆರ್ಎಸ್ (7718955555), ಅಥವಾ ಅಮೆಜಾನ್ ಮತ್ತು ಫೇಟಿಎಂ ಮೂಲಕ ರೀಫಿಲ್ ಬುಕ್ ಅಥವಾ ಪಾವತಿ ಮಾಡಬಹುದು ಎಂದು ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.












