ಉಡುಪಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುವಾಗ ಎಲ್ಲಾ ಇಲಾಖೆಯವರು ತಾವು ಮುಂದಿನ ದಿನಗಳಲ್ಲಿ ನಡೆಸುವ ಕಾರ್ಯಕ್ರಮದ ವೇಳಾಪಟ್ಟಿಯ ತಯಾರಿಸಿ ಗುರುವಾರ ಸ್ವೀಪ್ ಸಮಿತಿಗೆ ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಸಿಂಧೂ ಬಿ. ರೂಪೇಶ್ ಹೇಳಿದರು.
ಅವರು ಬುಧವಾರ ಜಿಲ್ಲಾ ಪಂಚಾಯತ್ನಲ್ಲಿ ನಡೆದ ಮುಂಬರುವ ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ವೀಪ್ ಸಮಿತಿಯ ವತಿಯಿಂದ ಕೈಗೊಳ್ಳಬೇಕಾದ ಮತದಾನ ಜಾಗೃತಿ ಕಾರ್ಯಕ್ರಮದ ಅನುಷ್ಟಾನ ಕುರಿತ ಸಭೆಯಲ್ಲಿ ಮಾತನಾಡಿದರು.
ಮತದಾನದ ಜಾಗೃತಿ ನೀಡುವ ಸಲುವಾಗಿ ಎಲ್ಲಾ ಇಲಾಖೆಗಳು ಕಾರ್ಯಪ್ರವೃತ್ತರಾಗಬೇಕಿದ್ದು, ಇಲಾಖೆಯ ಅಧಿಕಾರಿಗಳು ನಡೆಸಬೇಕೆಂದಿರುವ ಕಾರ್ಯಕ್ರಮಗಳ ಯೋಜನೆಯನ್ನು ಹಾಕಿಕೊಳ್ಳುವಂತೆ ಸೂಚನೆ ನೀಡಿದರು.
ಯಾವುದೇ ಕಾರ್ಯಕ್ರಮ ನಡೆಸುವಾಗ ನೀತಿ ಸಂಹಿತೆಯ ಚೌಕಟ್ಟಿನಲ್ಲೇ ನಡೆಸಬೇಕು ಹಾಗೂ ಕಾರ್ಯಕ್ರಮಗಳನ್ನು ನಡೆಸುವಾಗ ಯಾವುದೇ ಪಕ್ಷವನ್ನು ಸೂಚಿಸುವ ಚಿಹ್ನೆ ಅಥವಾ ಸ್ಟಿಕ್ಕರ್ ಮುಚ್ಚುವಂತೆ ನೆಹರು ಯುವ ಕೇಂದ್ರದ ಜಿಲ್ಲಾ ಕೋ-ಆರ್ಡಿನೇಟರ್ಗೆ ಹೇಳಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಿದ್ದು ಅವರಿಗೆ ಮತದಾನದ ಕುರಿತು ಜಾಗೃತಿ ಅಗತ್ಯವಾಗಿದೆ. ಆದರೆ ಪ್ರಸ್ತುತ ಪರೀಕ್ಷೆ ನಡೆಯುತ್ತಿರುವ ಕಾರಣ ವಿಧ್ಯಾರ್ಥಿಗಳ ಲಭ್ಯತೆ ಕಷ್ಟವಾಗಿದ್ದು, ವಿದ್ಯಾರ್ಥಿಗಳಿಗೆ ವಾಟ್ಸಪ್ ಪೂಲಕ ಮತದಾನದ ಕುರಿತ ಮಾಹಿತಿ ನೀಡುವುದು, ವಿದ್ಯಾರ್ಥಿಗಳ ಪೋಷಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಳ್ಳುವುದು ಹಾಗೂ ಶಿಕ್ಷಣದ ಕುರಿತು ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳನ್ನು ನಡೆಸಿ, ವಿದ್ಯಾರ್ಥಿಗಳಿಗೆ ಚುನಾವಣೆಯ ಕುರಿತ ವಿನೂತನ ಕಾರ್ಯಕ್ರಮಗಳನ್ನು ನಡೆಸಿ ಇವಿಎಂ ಮತ ಯಂತ್ರದ ಕುರಿತು ಮಾಹಿತಿ ನೀಡಿ ಪ್ರಾತ್ಯಕ್ಷಿಕೆಯನ್ನು ನಡೆಸಬಹುದು ಎಂದು ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ಎಲ್ಲಾ ಇಲಾಖೆಯ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಆಸಕ್ತಿ ವಹಿಸಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಮೀನುಗಾರ ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ಇವಿಎಂ ಮತಯಂತ್ರದ ಪ್ರಾತ್ಯಕ್ಷಿಕೆ ನಡೆಸಬೇಕು ಹಾಗೂ ಮತದಾನದ ದಿನವನ್ನು ತಿಳಿಸಬೇಕು. ಅಲ್ಲದೇ ಮೀನುಗಾರಿಕೆಗೆ ತೆರಳುವವರು ಹಿಂದಿರುಗಲು 10 ರಿಂದ 15 ದಿನಗಳಾಗುತ್ತದೆ. ಆದ ಕಾರಣ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಮತದಾನದ ದಿನಾಂಕವನ್ನು ತಿಳಿಸಿ ಮತದಾನದ ದಿನದಂದು ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತಚಲಾಯಿಸಲು ತಿಳಿಸಬೇಕು ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕರಿಗೆ ತಿಳಿಸಿದರು.
ಎಲ್ಲರಿಗೂ ಅನ್ವಯವಾಗುವಂತೆ ಸಭಾ ಕಾರ್ಯಕ್ರಮವನ್ನು ನಡೆಸಿ ಆ ಮೂಲಕ ಟ್ರಾನ್ಸ್ಜೆಂಡರ್ಗಳಿಗೆ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ನಡೆಸಿ ಇವಿಯಂ ಮತ ಯಂತ್ರದ ಕಾರ್ಯವಿಧಾನದ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನಡೆಸಿ ಮತದಾನದ ಪ್ರತಿಜ್ಞಾ ವಿಧಿ ನಡೆಸಬೇಕು ಹಾಗೂ ಸಖಿ ಬೂತ್ಗಳನ್ನು ಪರಿಶೀಲನೆ ನಡೆಸಿ ಮತದಾನಕ್ಕೆ ಸಜ್ಜುಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.