ಉಡುಪಿ: ನಾಪತ್ತೆಯಾಗಿರುವ ಏಳು ಮಂದಿ ಮೀನುಗಾರರನ್ನು ಹುಡುಕಿಕೊಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ನಾಪತ್ತೆಯಾದ ಮೀನುಗಾರರ ಮನೆಯ ಕುಟುಂಬದವರು ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.
ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಸಹಿತ ಏಳು ಮಂದಿ ಮೀನುಗಾರರು ಕಣ್ಮರೆಯಾಗಿ 87 ದಿನಗಳು ಕಳೆದಿವೆ. ಕಣ್ಮರೆಯಾಗಿರುವ ಏಳು ಮಂದಿ ಮೀನುಗಾರರ ಕುಟುಂಬದವರಲ್ಲಿ ಮೌನದ ಛಾಯೆ ಆವರಿಸಿದೆ. ಮೀನುಗಾರರು ಬರುತ್ತಾರೆ ಎಂಬ ನಂಬಿಕೆಯ ಮೇಲೆ ದಿನದೂಡುತ್ತಿದ್ದಾರೆ. ಆದರೆ ಮೀನುಗಾರರ ನಾಪತ್ತೆ ಪ್ರಕರಣದ ಬಗ್ಗೆ ಮೌನವಾಗಿರುವ ಸರ್ಕಾರದ ವಿರುದ್ಧ ಮಲ್ಪೆ
ಬಡಾನಿಡಿಯೂರು ಗ್ರಾಮದ ದಾಮೋದರ ಸಾಲಿಯಾನ್ ಹಾಗೂ ಚಂದ್ರಶೇಖರ್ ಕೋಟ್ಯಾನ್ ಕುಟುಂಬದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲದೆ, ಮತದಾನ ಪ್ರಕ್ರಿಯೆಯಿಂದ ದೂರ ಇರಲುನಿರ್ಧರಿಸಿದ್ದಾರೆ. ಮೀನುಗಾರರು ನಾಪತ್ತೆಯಾಗಿ ಮೂರು ತಿಂಗಳು ಸಮೀಪಿಸುತ್ತಿದೆ. ಆದರೆ ನಮಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸರಿಯಾದ ನ್ಯಾಯ ಒದಗಿಸಿಕೊಟ್ಟಿಲ್ಲ. ಮೀನುಗಾರರು ಏನಾದರೂ ಎಂಬುವುದರ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ಬಹಿರಂಗ ಪಡಿಸುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ಮತದಾನದಿಂದ ದೂರ ಇರಲು ನಿರ್ಧರಿಸಿದ್ದೇವೆ ಎಂದು ದಾಮೋದರ್ ಸಾಲಿಯಾನ್ ಸಹೋದರ ಗಂಗಾಧರ ಸಾಲಿಯನ್ ಎಂದು ತಿಳಿಸಿದ್ದಾರೆ.
ವರದಿ ಮುಚ್ಚಿಹಾಕಲು ಯತ್ನ: ಆರೋಪ
ನೌಕಾಪಡೆಯ ನೌಕೆ ಸಂಚರಿಸುವ ಸಮುದ್ರ ಮಾರ್ಗದಲ್ಲಿ ಬಂಡೆಗಳಿರಲು ಸಾಧ್ಯವಿಲ್ಲ. ಇದ್ದರೂ ಅದು ನೌಕೆಯ ಜಿಪಿಆರ್ಎಸ್ ತಂತ್ರಜ್ಞಾನದಲ್ಲಿ ಗೊತ್ತಾಗುತ್ತದೆ. ಆದ್ದರಿಂದ ನೌಕೆಗೆ ಡಿಕ್ಕಿ ಹೊಡೆದಿರುವುದು ಯಾವುದೇ ಬಂಡೆ ಕಲ್ಲಿಗೆ ಅಲ್ಲ. ಅದು ಯಾವುದೋ ಬೋಟಿಗೆ ಡಿಕ್ಕಿ ಹೊಡೆದಿರುವ ಸಂಭವವಿದೆ. ಅದು ಸುವರ್ಣ ತ್ರಿಭುಜ ಬೋಟ್ ಆಗಿರಬಹುದೇ ಎಂಬುವುದನ್ನು
ಖಚಿತ ಪಡಿಸಿಕೊಳ್ಳಬೇಕಾಗಿದೆ. ಆದರೆ ನೌಕಾಪಡೆಯ ಅಧಿಕಾರಿಗಳು ವರದಿ ಬಹಿರಂಗ ಪಡಿಸುತ್ತಿಲ್ಲ. ವರದಿ ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಮೀನುಗಾರ ಕುಟುಂಬದವರು ಆರೋಪಿಸಿದರು.
ಹುಸಿಯಾದ ನಿರೀಕ್ಷೆ:
ಇತ್ತೀಚೆಗೆ ಬೆಂಗಳೂರಿನಲ್ಲಿ ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ನಾಪತ್ತೆಯಾದ ಮೀನುಗಾರರ ಕುಟುಂಬದ ಸದಸ್ಯರು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿದ್ದರು. ಆಗ ಮೀನುಗಾರ ಕುಟುಂಬದವರ ಮನವಿಗೆ ಸ್ಪಂದಿಸಿದ ಸಚಿವೆ, ಕಣ್ಮರೆಯಾಗಿರುವ ಮೀನುಗಾರರ ಪತ್ತೆಗೆ ಎಲ್ಲ ರೀತಿಯಲ್ಲೂ ಪ್ರಯತ್ನಿಸಲಾಗುವುದು. ಮಹಾರಾಷ್ಟ್ರದ ಗಡಿ ಭಾಗದಲ್ಲಿ ನೌಕಾಪಡೆಯ ನೌಕೆಯ ತಳಭಾಗಕ್ಕೆ ಡಿಕ್ಕಿಯಾದ ಪ್ರಕರಣದ ಬಗ್ಗೆ ನೌಕಪಡೆಯ ಅಧಿಕಾರಿಗಳೊಂದಿಗೆ ಖುದ್ದಾಗಿ ಮಲ್ಪೆ ಆಗಮಿಸಿ ವರದಿ ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಸಚಿವರು ಮಲ್ಪೆಗೆ ಭೇಟಿ ನೀಡಿಲ್ಲ. ಅವರ ಆಗಮನದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಗಂಗಾಧರ್ ಸಾಲಿಯಾನ್.
ನಾಪತ್ತೆಯಾಗಿರುವ ಮೀನುಗಾರರನ್ನು ಹುಡುಕುವಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಜನಪ್ರತಿನಿಧಿಗಳು ಕೂಡ ಭರವಸೆಗಳನ್ನು ನೀಡಿದ್ದಾರೆ ಹೊರತು ಯಾವುದೇ ದಿಟ್ಟ ನಿರ್ಧಾರಗಳನ್ನು ಕೈಗೊಂಡಿಲ್ಲ. ಹಾಗಾಗಿ ಈ ಬಾರಿಯ
ಲೋಕಸಭೆ ಚುನಾವಣೆಯ ಮತದಾನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ನಿತ್ಯಾನಂದ ಕೋಟ್ಯಾನ್ (ಚಂದ್ರಶೇಖರ್ ಕೋಟ್ಯಾನ್ ಸಹೋದರ) ತಿಳಿಸಿದ್ದಾರೆ.