ಕಾರ್ಕಳ: ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಪೋಕ್ಸೋ ಕಾಯ್ದೆಯಡಿ ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಗುಲ್ವಾಡಿಯ ಇಮ್ರಾನ್ (24) ಎಂದು ಗುರುತಿಸಲಾಗಿದೆ. ಈತ 12 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ. ಈ ಬಗ್ಗೆ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ದೂರು ಬಂದಿತ್ತು.
ಈ ಹಿನ್ನೆಲೆಯಲ್ಲಿ ಬಾಲಕಿಯ ಮನೆಗೆ ಹೋಗಿ ಆಪ್ತ ಸಮಾಲೋಚನೆ ನಡೆಸಿದಾಗ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಷಯ ಗೊತ್ತಾಗಿದೆ. ಅದರಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಅವರು, ಈ ಬಗ್ಗೆ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಕಾರ್ಕಳ ನಗರ ಠಾಣಾ ಪೊಲೀಸರು, ವೃತ್ತ ನಿರೀಕ್ಷಕರಾದ ಸಂಪತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕರಾದ ಮಧು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೊನಾಲ್ಡ್ ಫುರ್ಟಾಡೋ ಅವರ ಆದೇಶದಂತೆ ರಕ್ಷಿಸಲ್ಪಟ್ಟ ಅಪ್ರಾಪ್ತ ಬಾಲಕಿಗೆ ಸೂಕ್ತ ಪುನರ್ವಸತಿ ಕಲ್ಪಿಸಲಾಗಿದೆ. ಇನ್ನು ಬಾಲಕಿಯ ರಕ್ಷಣಾ ಕಾರ್ಯದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಆಪ್ತಸಮಾಲೋಚಕಿ ಅಂಬಿಕಾ, ಸಮಾಜಕಾರ್ಯಕರ್ತ ಯೋಗೀಶ್, ಕಾರ್ಕಳ ನಗರ ಠಾಣಾ ಸಿಬ್ಬಂದಿಗಳಾದ ಶ್ಯಾಮ್, ರವೀಂದ್ರ ಇನ್ನಿತರರು ಭಾಗವಹಿಸಿದ್ದರು.