ಉಡುಪಿ: ಉದ್ಯಾವರ ಗ್ರಾಮದ ಗುಡ್ಡೆಯಂಗಡಿ ರಾಷ್ಟ್ರೀಯ ಹೆದ್ದಾರಿ ಬಳಿ ಆಟೊ ರಿಕ್ಷಾದಲ್ಲಿ ಗಾಂಜಾ ಮಾರಾಟ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸೆನ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು ₹40 ಸಾವಿರ ಮೌಲ್ಯದ 1.226 ಕೆ.ಜಿ ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಗ್ರಾಮದ ಕುಂಪಳ ನಿವಾಸಿಗಳಾದ ಕಾರ್ತಿಕ್ (24) ಹಾಗೂ ತೇಜಸ್ (18) ಬಂಧಿತ ಆರೋಪಿಗಳು.
ಆರೋಪಿಗಳು ಜುಲೈ 31ರಂದು ರಾತ್ರಿ 7.45ಕ್ಕೆ ಉದ್ಯಾವರ ಗ್ರಾಮದ ಗುಡ್ಡೆಯಂಗಡಿ ರಾಷ್ಟ್ರೀಯ ಹೆದ್ದಾರಿ ಬಳಿಯ ಬಬ್ಬುಸ್ವಾಮಿ ದೈವಸ್ಥಾನದ ಎದುರು ಸಾರ್ವಜನಿಕ ಸ್ಥಳದಲ್ಲಿ ಆಟೊ ರಿಕ್ಷಾದಲ್ಲಿ ಗಾಂಜಾ ಮಾರಾಟ ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ಮಂಜುನಾಥ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 1. 226 ಕೆ.ಜಿ. ಗಾಂಜಾ, ಗಿರಾಕಿಗಳನ್ನು ಕುದುರಿಸಲು ಬಳಸಿದ್ದ 2 ಮೊಬೈಲ್ ಪೋನ್ ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾ ಸಹಿತ ಒಟ್ಟು ₹1.35 ಲಕ್ಷದ ಮೊತ್ತದ ಸೊತ್ತಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸೆನ್ ಪೊಲೀಸ್ ಠಾಣಾ ಪಿ.ಎಸ್.ಐ. ಲಕ್ಷ್ಮಣ, ಎ.ಎಸ್.ಐ. ಕೇಶವ ಗೌಡ ಹಾಗೂ ಸಿಬ್ಬಂದಿಗಳಾದ ಕೃಷ್ಣಪ್ರಸಾದ್, ಪ್ರವೀಣ, ರಾಘವೇಂದ್ರ ಉಪ್ಪೂರು ಮತ್ತು ಪ್ರಸನ್ನ ಸಾಲಿಯಾನ್ ಪಾಲ್ಗೊಂಡಿದ್ದರು.