ಐದಕ್ಕಿಂತ ಹೆಚ್ಚು ಮಕ್ಕಳನ್ನು ಹೆತ್ತರೆ ವಿಶೇಷ ಸೌಲಭ್ಯ: ಕೇರಳ ಕ್ಯಾಥೋಲಿಕ್ ಚರ್ಚ್ ಘೋಷಣೆ

ತಿರುವನಂತಪುರಂ: ಉತ್ತರ ಪ್ರದೇಶ ಸಹಿತ ವಿವಿಧ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ರೂಪಿಸಲು ಚಿಂತನೆ ನಡೆಸುತ್ತಿದ್ದರೆ, ಇದಕ್ಕೆ ತದ್ವಿರುದ್ಧ ಎಂಬಂತೆ ಕೇರಳದ ಕ್ಯಾಥೋಲಿಕ್ ಚರ್ಚ್ ಯೋಜನೆಯೊಂದನ್ನು ಘೋಷಣೆ ಮಾಡಿದೆ.

ಕೇರಳ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರಿಶ್ಚಿಯನ್​ ಸಮುದಾಯದ ಸಂಖ್ಯೆ ಕಡಿಮೆಯಾಗುತ್ತಿದ್ದು, ಸಮುದಾಯದಲ್ಲಿ ಜನನ ಪ್ರಮಾಣ ಶೇ.14ಕ್ಕಿಂತ ಕಡಿಮೆಯಾಗಿದೆ. ಆದ್ದರಿಂದ ಐದು ಅಥವಾ ಐದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದ ಕುಟುಂಬಕ್ಕೆ ಅಗತ್ಯವಿರುವ ವಿಶೇಷ ಸೌಲಭ್ಯಗಳನ್ನು ಏರ್ಪಡಿಸುವುದಾಗಿ ಕೇರಳದ ಕ್ಯಾಥೋಲಿಕ್ ಚರ್ಚ್ ಹೇಳಿಕೆ ನೀಡಿದೆ.

ಸಿರೋ-ಮಲಬಾರ್ ಚರ್ಚ್ ಅಡಿಯಲ್ಲಿ ಬರುವ ಪಾಲಾ ಡಯಾಸಿಸ್ನ ಕುಟುಂಬಗಳಿಗೆ ವಿಶೇಷ ಯೋಜನೆ ಸೌಲಭ್ಯಗಳನ್ನು ನೀಡುವುದಾಗಿ ಚರ್ಚ್​​ ಹೇಳಿದೆ. 2000 ಇಸವಿಯ ಬಳಿಕ ಮದುವೆಯಾಗಿ ಐದು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದ ಪೋಷಕರಿಗೆ ಪ್ರತಿ ತಿಂಗಳು 1,500 ರೂಪಾಯಿ ನಗದು, ಮಹಿಳೆಯರ 4ನೇ ಹೆರಿಗೆ ಬಳಿಕ ಚರ್ಚ್​​ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಹಾಗೂ ಚರ್ಚ್​​ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಕಾಲರ್​ಶಿಪ್ ನೀಡುವುದಾಗಿ ಚರ್ಚ್​​ ಪ್ರಚಾರ ಮಾಡುತ್ತಿದೆ.

ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಫ್ರಾ. ಫ್ಯಾಮಿಲಿ ಅಪೋಸ್ಟೊಲೇಟ್ ನಿರ್ದೇಶಕ ಜೋಸೆಫ್ ಕುಟ್ಟಿಯಾಂಕಲ್, ವಿಶೇಷವಾಗಿ ಕೋವಿಡ್​​​-19ರ ನಂತರದ ಸನ್ನಿವೇಶದಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗಿತ್ತು. ಅದು ದೊಡ್ಡ ಕುಟುಂಬಗಳಿಗೆ ಸಹಾಯವಾಗಲು ಯೋಜನೆ ಜಾರಿ ಮಾಡಲಾಗುತ್ತಿದೆ. ಎಷ್ಟು ಕುಟುಂಬಗಳಿಗೆ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂಬ ಬಗ್ಗೆ ಇನ್ನಷ್ಟೇ ಫೈನಲ್​ ಮಾಡಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೇರಳ ಸರ್ಕಾರ 2011ರಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನ ಪಡೆದರೇ ದಂಡವನ್ನು ವಿಧಿಸಲು ಮುಂದಾಗಿತ್ತು. ಆದರೆ ಈ ವೇಳೆ ವಿವಿಧ ಕ್ಯಾಥೋಲಿಕ್​ ಚರ್ಚ್​ ಸೇರಿದಂತೆ ವಿವಿಧ ಸಂಘಟನೆಗಳು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದವು. ಕೇರಳ ರಾಜ್ಯ ರಚನೆಯಾದ ಸಂದರ್ಭದಲ್ಲಿ ರಾಜ್ಯದಲ್ಲಿ ಕ್ರಿಶ್ಚಿಯನ್​ ಸಮುದಾಯ ಶೇ.18.38 ರಷ್ಟೊಂದಿಗೆ ಎರಡನೇ ಅತಿ ದೊಡ್ಡ ಸಮುದಾಯವಾಗಿತ್ತು.