ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡವು ಎರಡನೇ ಜಯ ಗಳಿಸಿದೆ.
3-0 ಅಂತರದಿಂದ ಸ್ಪೇನ್ ತಂಡವನ್ನು ಮಣಿಸುವ ಮೂಲಕ ಒಲಿಂಪಿಕ್ಸ್‌ನಲ್ಲಿ ಭರ್ಜರಿ ಗೆಲುವು ದಾಖಲಿಸಿದೆ.
ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿದ್ದ ಭಾರತ ತಂಡವು ಮಂಗಳವಾರದ ಪಂದ್ಯದಲ್ಲಿ ಮತ್ತೆ ಪುಟಿದೆದ್ದಿದೆ. ‘ಎ’ ಗುಂಪಿನ ಪಂದ್ಯದಲ್ಲಿ ವಿಶ್ವದ ನಂ. 9 ಸ್ಪೇನ್ ವಿರುದ್ಧ ಗೆಲುವು ದಾಖಲಿಸುವಲ್ಲಿ ಸಿಮ್ರನ್‌ಜೀತ್ ಸಿಂಗ್ ಮತ್ತು ರೂಪೀಂದರ್ ಪಾಲ್ ಸಿಂಗ್ ಮಹತ್ತರ ಪಾತ್ರ ವಹಿಸಿದರು.
ಕ್ರೀಡಾಕೂಟದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3–2ರಿಂದ ಗೆಲುವು ಸಾಧಿಸುವ ಮೂಲಕ ಭಾರತ ಶುಭಾರಂಭ ಮಾಡಿತ್ತು. ಸ್ಪೇನ್ ತಂಡವು ಈವರೆಗೆ ಗೆಲುವು ದಾಖಲಿಸಿಲ್ಲ. ನ್ಯೂಜಿಲೆಂಡ್ ವಿರುದ್ಧ 3–4ರಲ್ಲಿ ಸೋಲನುಭವಿಸಿದ್ದ ಸ್ಪೇನ್, ಅರ್ಜೆಂಟಿನಾ ವಿರುದ್ಧದ ಪಂದ್ಯವನ್ನು 1–1ರಿಂದ ಡ್ರಾ ಮಾಡಿಕೊಂಡಿತ್ತು.
ಭಾರತ ತಂಡದ ಮುಂದಿನ ಪಂದ್ಯವು ಒಲಿಂಪಿಕ್ ಚಾಂಪಿಯನ್ ತಂಡ ಅರ್ಜೆಂಟೀನಾ ವಿರುದ್ಧ ಗುರುವಾರ ನಡೆಯಲಿದೆ.