ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಸಿಎಂ ಬದಲಾವಣೆ ಚರ್ಚೆಗೆ ಕಡೆಗೂ ತೆರೆ ಬಿದ್ದಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿ.ಎಸ್. ಯಡಿಯೂರಪ್ಪ ಇಂದು ಘೋಷಣೆ ಮಾಡಿದ್ದಾರೆ.
ಮಧ್ಯಾಹ್ನ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.
ಮಧ್ಯಾಹ್ನ ಊಟದ ಬಳಿಕ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಯಡಿಯೂರಪ್ಪ ಗದ್ಗದಿತರಾಗಿ ಹೇಳಿದರು.
ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಾಧನಾ ಸಮಾವೇಶದಲ್ಲಿ ಆರಂಭದಿಂದಲೂ ಭಾವನಾತ್ಮಕವಾಗಿ ಮಾತನಾಡಿದ ಅವರು, ಯಾರೂ ಇಲ್ಲದ ಕಾಲದಿಂದಲೂ ಪಕ್ಷಕ್ಕಾಗಿ ದುಡಿದಿರುವೆ. ಎಲ್ಲ ಸಂದರ್ಭದಲ್ಲೂ ಅಗ್ನಿ ಪರೀಕ್ಷೆ ಎದುರಿಸಿದೆ. 75 ವರ್ಷ ವಯಸ್ಸಾದರೂ ಎರಡು ವರ್ಷ ಅಧಿಕಾರ ನಡೆಸಲು ಅವಕಾಶ ಕಲ್ಪಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವರುಷ್ಠರಿಗೆ ನಾನು ಚಿರ ಋಣಿ ಎಂದು ಕಣ್ಣೀರು ಹಾಕುತ್ತಾ ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ಕೇಂದ್ರ ಸಂಪುಟದಲ್ಲಿ ಸಚಿವನಾಗುವಂತೆ ಆಹ್ವಾನ ನೀಡಿದ್ದರು. ರಾಜ್ಯದಲ್ಲಿ ಪಕ್ಷ ಕಟ್ಟದೇ ಕೇಂದ್ರಕ್ಕೆ ಬರುವುದಿಲ್ಲ ಎಂದು ಇಲ್ಲಿಯೇ ಉಳಿದಿದ್ದೆ ಎಂದು ಭಾವುಕರಾಗಿ ನುಡಿದರು.
ಹಿಂದೆ ಬಿಜೆಪಿ ಜತೆ ಯಾರೂ ಇರಲಿಲ್ಲ. ಅಡ್ವಾಣಿ, ಮುರಳಿಮನೋಹರ ಜೋಶಿ ಬಂದಾಗಲೂ ಸಭೆಗೆ 300-400 ಜನ ಸೇರುತ್ತಿರಲಿಲ್ಲ. ಆದರೂ ಎದೆಗುಂದದೆ ಪಕ್ಷ ಕಟ್ಟಿದೆ. ಇಬ್ಬರು ಶಾಸಕರು ಗೆದ್ದಾಗ ವಸಂತ ಬಂಗೇರ ಪಕ್ಷ ತೊರೆದರು. ಆಗ ಏಕಾಂಗಿಯಾಗಿ ವಿಧಾನಸಭೆಯಲ್ಲಿ ಹೋರಾಡಿದೆ. ಧೈರ್ಯಗೆಡದೆ ಪಕ್ಷ ಕಟ್ಟಿದ್ದೆ ಎಂದು ನೆನಪಿಸಿಕೊಂಡರು.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷವನ್ನು ಅಧಿಕಾರ ತಂದ ಕೀರ್ತಿ ಯಡಿಯೂರಪ್ಪನವರದು. 2007, 2008, 2018 ಮತ್ತು 2019ರಲ್ಲಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಗಾದಿಗೆ ಏರಿದ್ದರು. ಕರ್ನಾಟಕದಲ್ಲಿ ನಾಲ್ಕು ಬಾರಿ ಸಿಎಂ ಕುರ್ಚಿಗೆ ಏರಿದ ಏಕೈಕ ವ್ಯಕ್ತಿ ಬಿ.ಎಸ್.ಯಡಿಯೂರಪ್ಪ