ಉಡುಪಿ: ಜುಲೈ 16ರಂದು ನಗರದಲ್ಲಿ ನಡೆದ ಉದ್ಯಮಿಯನ್ನು ಅಪಹರಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಕಟಪಾಡಿ ಜಂಕ್ಷನ್ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ನಂದಳಿಕೆಯ ಸಂತೋಷ್ ಬೋವಿ, ಕಾರ್ಕಳ ನಿಟ್ಟೆಯ ಅನಿಲ್ ಪೂಜಾರಿ ಹಾಗೂ ಸಾಸ್ತಾನ ಕೊಡಿಯ ಮಣಿ ಯಾನೆ ಮಣಿಕಂಠ ಖಾರ್ವಿ ಎಂದು ಗುರುತಿಸಲಾಗಿದೆ.
ಮಣಿಕಂಠ ಖಾರ್ವಿ
ಪ್ರಕರಣದ ಹಿನ್ನೆಲೆ:
ಈ ಮೂವರು ಅಪಹರಣಕಾರರು ಜುಲೈ 16ರಂದು ನಗರದಲ್ಲಿ ಷೇರು ವ್ಯವಹಾರ ನಡೆಸುತ್ತಿದ್ದ ತುಮಕೂರು ಮೂಲದ ಅಶೋಕ್ ಕುಮಾರ್ ಎಂಬವರನ್ನು ಅಪಹರಿಸಿ, ಅವರಿಂದ
₹2 ಲಕ್ಷ ನಗದು ಹಾಗೂ ಮೊಬೈಲ್ ಸುಲಿಗೆ ಮಾಡಿದ್ದರು.
ಅನಿಲ್ ಪೂಜಾರಿ
ಅಪಹರಿಸಿದ್ದು ಹೇಗೆ.?
ಜುಲೈ 16ರಂದು ಸಂತೋಷ್ ಬೋವಿ ಎಂಬಾತ ವ್ಯವಹಾರದ ಬಗ್ಗೆ ಮಾತನಾಡಲು ಅಶೋಕ್ ಅವರ ಕಚೇರಿಗೆ ಬಂದಿದ್ದನು. ಬಳಿಕ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದನು. ಕಾರು ಅಜ್ಜರಕಾಡು ಸಮೀಪಿಸುತ್ತಿದ್ದಂತೆ ಮತ್ತೆ ಮತ್ತಿಬ್ಬರು ಕಾರು ಹತ್ತಿದ್ದರು. ಬಳಿಕ ಅವರನ್ನು ರೆಸಾರ್ಟ್ ವೊಂದಕ್ಕೆ ಕರೆದೊಯ್ದು ಅಲ್ಲಿ ತಲವಾರು, ಪಿಸ್ತೂಲ್ ತೋರಿಸಿ ಜೀವ ಬೆದರಿಕೆಯೊಡ್ಡಿದ್ದರು. ಅಲ್ಲದೆ, ಅವರ ಬಳಿಯಲ್ಲಿದ್ದ ₹ 2 ಲಕ್ಷ ನಗದು, ಮೊಬೈಲ್ ಗಳನ್ನು ದೋಚಿದ್ದರು.
ಸಂತೋಷ್ ಬೋವಿ
ಅಲ್ಲದೆ, ₹ 70 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಇಲ್ಲದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಅದರಂತೆ ಅಪಹರಣಕಾರರು ಅಶೋಕ್ ಅವರನ್ನು ಹಣ ಡ್ರಾ ಮಾಡಲು ಬ್ಯಾಂಕ್ ಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಅಶೋಕ್ ಅವರು ಬ್ಯಾಂಕ್ ನಲ್ಲಿ ಕಳ್ಳರು ಎಂದು ಜೋರಾಗಿ ಬೊಬ್ಬೆ ಹಾಕಿದಾಗ ಅಪಹರಣಕಾರರು ಅಲ್ಲಿಂದ ಪರಾರಿಯಾಗಿದ್ದರು.