ಹಿರಿಯಡಕ: ಕೌಟುಂಬಿಕ ಕಲಹದಿಂದ ಮನನೊಂದ ನವವಿವಾಹಿತ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರ್ಣಂಕಿಲ 82 ಕುದಿ ಗ್ರಾಮದ ವರ್ವಾಡಿ ಕ್ರಾಸ್ ಎಂಬಲ್ಲಿ ನಡೆದಿದೆ.
ಮಂಚಿ ರಾಜೀವನಗರದ ನಿವಾಸಿ ಅರುಣ (ಕುಟ್ಟಿ) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತ ಯುವಕ. 28 ವರ್ಷದ ಈತ, ವರ್ಷದ ಹಿಂದೆಯಷ್ಟೇ ಪಡುಬೆಳ್ಳೆ ಪಾಂಬೂರಿನ ಪ್ರತೀಕ್ಷಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದನು.
ಎರಡು ತಿಂಗಳ ಹಿಂದೆ ಪೆರ್ಣಂಕಿಲ 82 ಕುದಿ ಗ್ರಾಮದ ವರ್ವಾಡಿ ಕ್ರಾಸ್ ಎಂಬಲ್ಲಿ ಬಾಡಿಗೆ ಮನೆ ಮಾಡಿ ಇಬ್ಬರು ಒಟ್ಟಿಗೆ ಸಂಸಾರ ನಡೆಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿಯ ಮಧ್ಯೆ ಆಗಾಗ ಜಗಳ ಉಂಟಾಗುತ್ತಿದ್ದು, ಜಗಳ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಜುಲೈ 13ರಂದು ಪತ್ನಿ ಪ್ರತೀಕ್ಷಾ ತನ್ನ ತಾಯಿ ಮನೆಗೆ ಹೋಗಿದ್ದಳು.
ಇದೇ ಖಿನ್ನತೆಯಲ್ಲಿ ಮನನೊಂದ ಅರುಣ ಜುಲೈ 15ರ ರಾತ್ರಿ 8 ಗಂಟೆಯಿಂದ ಜುಲೈ 16 ಬೆಳಿಗ್ಗೆ 10 ಗಂಟೆಯ ಮಧ್ಯೆ ಬಾಡಿಗೆ ಮನೆಯ ಛಾವಣಿಗೆ ಬೈರಸ್ ನಿಂದ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.