ಚೆನ್ನೈ: ತಮಿಳುನಾಡಿನಲ್ಲಿ ಮಾಧ್ಯಮಗಳು ಬಿಜೆಪಿಯನ್ನು ಸುಖಾಸುಮ್ಮನೆ ಟೀಕೆ ಮಾಡುತ್ತಿವೆ. ಮುಂದಿನ ಆರು ತಿಂಗಳಲ್ಲಿ ಮಾಧ್ಯಮಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದೇವೆ ಎಂದು ರಾಜ್ಯ ಬಿಜೆಪಿ ಘಟಕದ ನಿಯೋಜಿತ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ ಎಂಬ ವರದಿಯಾಗಿದೆ.
ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ತಮಿಳುನಾಡಿನ ನಿರ್ಗಮಿತ ಬಿಜೆಪಿ ಅಧ್ಯಕ್ಷ ಎಲ್.ಮುರಗನ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಅಲ್ಲದೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ರಾಜ್ಯ ಖಾತೆಯ ಸ್ಥಾನವನ್ನು ಎಲ್ ಮುರಗನ್ ಅವರಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರನ್ನು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಎಲ್ ಮುರುಗನ್ ಅವರಿಗೆ ಮಾಹಿತಿ ಮತ್ತು ಪ್ರಸಾರ ಖಾತೆ ಸ್ಥಾನವನ್ನು ನೀಡ್ತಿದ್ದಂತೆ ಅಣ್ಣಾಮಲೈ ಈ ಹೇಳಿಕೆ ನೀಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಸದ್ಯ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಅಣ್ಣಾಮಲೈ ಸ್ಪಷ್ಟನೆ:
ವಿವಾದ ಆಗುತ್ತಿದ್ದಂತೆ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿರುವ ಅಣ್ಣಾಮಲೈ, ‘ನಾನು ಪ್ರಸ್ತಾಪಿಸಿದ್ದು ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತನ ಐಟಿ ನಿಯಮಗಳ ಬಗ್ಗೆ. ಈ ನಿಯಮದ ಪ್ರಕಾರ ರಾಜಕೀಯ ನಾಯಕರು ತಪ್ಪಾಗಿ ಸುದ್ದಿಗಳನ್ನ ಹರಡೋದು ನಿಲ್ಲಲಿದೆ. ಅಲ್ಲದೇ ಸುಳ್ಳು ಮಾಹಿತಿಗಳನ್ನು ನೀಡುವ ಮಾಧ್ಯಮಗಳನ್ನ ಗುರುತಿಸಿ, ನಿಯಂತ್ರಿಸಲಾಗುತ್ತದೆ ಅಂದಿದ್ದೆ ಅಂತಾ ಸ್ಪಷ್ಟಪಡಿಸಿದ್ದಾರೆ.