ಅಲೆವೂರು ಗ್ರಾಪಂನಿಂದ ಶೇ. 10ರಷ್ಟು ತೆರಿಗೆ ಕಡಿತ: ರಾಜ್ಯದಲ್ಲೇ ಪ್ರಥಮ

ಉಡುಪಿ: ಕೊರೊನಾ ಲಾಕ್ ಡೌನ್ ನಿಂದಾಗಿ ತೊಂದರೆಗೊಳಗಾಗಿರುವ ಜನರ ಸಂಕಷ್ಟಕ್ಕೆ ಮಿಡಿದಿರುವ ಅಲೆವೂರು ಗ್ರಾಮ ಪಂಚಾಯತ್, ಶೇ. 10ರಷ್ಟು ತೆರಿಗೆ ಕಡಿತ ಮಾಡುವ ಮೂಲಕ‌ ಜನರ ಆರ್ಥಿಕ‌ ಹೊರೆಯನ್ನು ಇಳಿಸಿದೆ.

ಅಲೆವೂರು ಗ್ರಾಮ ಪಂಚಾಯತ್ ಕೈಗೊಂಡಿರುವ ಈ ನಿರ್ಧಾರ ರಾಜ್ಯದಲ್ಲಿಯೇ ಪ್ರಥಮವಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈಚೆಗೆ ನಡೆದ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅಲೆವೂರು ಹಾಗೂ ಕೊರಂಗ್ರಪಾಡಿ ಗ್ರಾಮಗಳ ಜನರಿಗೆ 2021- 22ನೇ ಸಾಲಿನ ಮನೆ ತೆರಿಗೆ, ವಾಣಿಜ್ಯ ಕಟ್ಟಡ ತೆರಿಗೆ ಮತ್ತು ಉದ್ಯಮ ಪರವಾನಿಗೆ ಶುಲ್ಕ ಶೇ. 10ರಷ್ಟು ಕಡಿತಗೊಳಿಸಿ ನಿರ್ಣಯ ಕೈಗೊಳ್ಳಲಾಯಿತು.

ಮನೆ ಹಾಗೂ ಕಟ್ಟಡ ತೆರಿಗೆಯಿಂದ ಗ್ರಾಪಂಗೆ ಅಂದಾಜು 30 ಲಕ್ಷ ರೂ. ಆದಾಯವಿದ್ದು, ಉದ್ಯಮ ಪರವಾನಿಗೆ ಶುಲ್ಕದಿಂದ ಸುಮಾರು 150 ಉದ್ಯಮಿಗಳಿಂದ ಅಂದಾಜು ₹1 ಲಕ್ಷದಷ್ಟು ಶುಲ್ಕ ಸಂಗ್ರಹವಾಗುತ್ತಿತ್ತು. ಇದೀಗ ಶೇ. 10ರಷ್ಟು ತೆರಿಗೆ ಹಾಗೂ ಶುಲ್ಕ ವಿನಾಯಿತಿ ಪ್ರಕಟಿಸಿರುವುದರಿಂದ ಗ್ರಾಪಂ ಆದಾಯದಲ್ಲಿ ಅಂದಾಜು ₹ 3 ಲಕ್ಷ ಕಡಿತವಾಗಲಿದೆ ಎಂದು ಅಂದಾಜಿಸಲಾಗಿದೆ.

ಕೊರೊನಾ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಉದ್ಯೋಗ ನಷ್ಟ ಹಾಗೂ ವ್ಯಾಪಾರದಲ್ಲಿ ನಷ್ಟ ಅನುಭವಿಸಿರುವುದರಿಂದ ನಮ್ಮೂರಿನ ಜನ ಸಂಕಷ್ಟದಲ್ಲಿದ್ದಾರೆ. ಅವರ ಕಷ್ಟಗಳಿಗೆ ಸ್ಪಂದಿಸಬೇಕಾದುದು ಪಂಚಾಯಿತಿಯ ಕರ್ತವ್ಯವಾಗಿದ್ದು, ಅದರಂತೆ ತೆರಿಗೆ ಹಾಗೂ ಶುಲ್ಕದ ಮೊತ್ತದಲ್ಲಿ ಶೇ. 10ರಷ್ಟು ಕಡಿತ ಮಾಡಿದ್ದೇವೆ. ಈ ನಮ್ಮ ಸಣ್ಣ ಪ್ರಯತ್ನದಿಂದ ಜನರಿಗೆ ಸ್ವಲ್ಪಮಟ್ಟಿನ ಪರಿಹಾರ ಸಿಗಬಹುದು ಎಂದು ಅಲೆವೂರು ಗ್ರಾಪಂ ಅಧ್ಯಕ್ಷೆ ಪುಷ್ಪಾ ಅಂಚನ್ ಹೇಳಿದ್ದಾರೆ.