ಕೇರಳದಲ್ಲಿ ಝೀಕಾ ವೈರಸ್ ಹೆಚ್ಚಳ: ಮಂಗಳೂರಿನಲ್ಲಿ ಹೈ-ಅಲರ್ಟ್​

ಕೇರಳ: ಕೇರಳದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಝೀಕಾ ವೈರಸ್​ ದೊಡ್ಡ ಆತಂಕ ಸೃಷ್ಟಿ ಮಾಡಿದ್ದು, ದಿನದಿಂದ ದಿನಕ್ಕೆ ಝೀಕಾ ವೈರಸ್​ನ ಸೋಂಕು ಹೆಚ್ಚಳವಾಗುತ್ತಿದೆ. ಇದರಿಂದ ಕೇರಳದ ಗಡಿಗೆ ಹೊಂದಿಕೊಂಡಿರುವ ರಾಜ್ಯದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲೂ ವೈರಸ್ ನ ಆತಂಕ ಶುರುವಾಗಿದೆ.

ಕೇರಳದಲ್ಲಿ ಝೀಕಾ ಸೋಂಕಿತರ ಒಟ್ಟು ಸಂಖ್ಯೆ 28ಕ್ಕೆ ಏರಿಕೆಯಾಗಿದೆ. 7 ಮಂದಿ ಮಹಿಳೆಯರು, 2 ವರ್ಷದ ಮಗು ಸೇರಿ ಒಟ್ಟು 28 ಜನರಲ್ಲಿ ವೈರಸ್ ಪತ್ತೆಯಾಗಿದೆ. ಇನ್ನು ಹೊಸ ಪ್ರಕರಣಗಳಲ್ಲಿ ಇಬ್ಬರು ಅನಾಯರಾ ಪ್ರದೇಶದ ಮೂಲದವರಾಗಿದ್ದು, ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿಯೇ ರೋಗದ ಕ್ಲಸ್ಟರ್‌ ಗುರುತಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ.

ಮಂಗಳೂರಲ್ಲಿ ಹೈ-ಅಲರ್ಟ್​:
ಸೋಂಕು ಹರಡುವುದನ್ನು ತಡೆಯಲು ಈ ಪ್ರದೇಶದಲ್ಲಿ ಸೊಳ್ಳೆಗಳನ್ನು ನಾಶಪಡಿಸಲು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ಜಿಲ್ಲೆಗೆ ಆಗಮಿಸುತ್ತಿರುವವರ ಮೇಲೆ ತೀವ್ರ ನಿಗಾ ಇಡುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಆದೇಶ ಮಾಡಿದ್ದಾರೆ.

ಜಿಲ್ಲೆಯಲ್ಲಿ ಜ್ವರದಿಂದ ಬಳಲುತ್ತಿರುವವರ ಬಗ್ಗೆ ಕೂಡಲೇ ಮಾಹಿತಿ ಕಲೆ ಹಾಕಿ. ಜಿಲ್ಲೆಯ ಎಲ್ಲಾ ಸ್ಕ್ಯಾನಿಂಗ್ ಹಾಗು ಹೆರಿಗೆ ಆಸ್ಪತ್ರೆಗಳಿಗೆ ಬರುವ ಗರ್ಭಿಣಿಯರ ಬಗ್ಗೆ ನಿಗಾ ಇಡಿ ಎಂದು ಸೂಚಿಸಿದ್ದಾರೆ.