ದೇಶದ ಮೊದಲ ಕೋವಿಡ್ ಸೋಂಕಿತೆಗೆ ಮತ್ತೆ ಕೋವಿಡ್ ಪಾಸಿಟಿವ್.!

ತ್ರಿಸ್ಸೂರ್: ದೇಶದಲ್ಲಿಯೇ ಮೊದಲ ಬಾರಿಗೆ ಕೇರಳದಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿತ್ತು. ಕೇರಳದ ತ್ರಿಸ್ಸೂರ್ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಸುಮಾರು ಒಂದೂವರೆ ವರ್ಷಗಳ ನಂತರ ಅದೇ ವಿದ್ಯಾರ್ಥಿಯಲ್ಲಿ ಮತ್ತೆ ಪಾಸಿಟಿವ್ ಕಂಡುಬಂದಿದೆ.

ಕೋವಿಡ್ ಹುಟ್ಟಿದ್ದ ಚೀನಾದ ವುಹಾನ್ ನಿಂದ ಹಿಂತಿರುಗಿದ ವೈದ್ಯಕೀಯ ವಿದ್ಯಾರ್ಥಿಗೆ ಕಳೆದ ವರ್ಷ ಜನವರಿ 30 ರಂದು ಕೋವಿಡ್ -19 ಪಾಸಿಟಿವ್ ದೃಢಪಟ್ಟಿತ್ತು. ಆ ಮೂಲಕ ದೇಶದಲ್ಲಿ ಕೋವಿಡ್-19 ಸೋಂಕು ತಗುಲಿದ ಮೊದಲ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಈಕೆ ವುಹಾನ್ ವಿಶ್ವವಿದ್ಯಾನಿಲಯದಲ್ಲಿ ವೈದ್ಯಕೀಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ದೆಹಲಿಗೆ ತೆರಳುವ ಮುನ್ನ ಕೋವಿಡ್ ಪರೀಕ್ಷೆ ಮಾಡಿಸಬೇಕಾಗಿತ್ತು. ಆಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಆದರೆ, ಆರ್ ಟಿ- ಪಿಸಿಆರ್ ಪರೀಕ್ಷೆ ಮಾಡಿಸಿದಾಗ ಮತ್ತೆ ಪಾಸಿಟಿವ್ ಬಂದಿದೆ. ಅಲ್ಪ ರೋಗಲಕ್ಷಣಗಳಿದ್ದು, ಸದ್ಯ ಹೋಮ್ ಐಸೋಲೇಷನ್ ನಲ್ಲಿರುವುದಾಗಿ ಮತಿಲಾಕಂ ನಿವಾಸಿಯಾಗಿರುವ ವಿದ್ಯಾರ್ಥಿನಿ ಹೇಳಿದ್ದಾಳೆ.
ವಿದ್ಯಾರ್ಥಿನಿಯ ಆರೋಗ್ಯ ಸ್ಥಿರವಾಗಿದ್ದು, ಭಯಪಡಬೇಕಾದ ಅಗತ್ಯವಿಲ್ಲ. ಕೆಲ ಜನರಲ್ಲಿ ಎರಡನೇ ಬಾರಿಗೆ ಕೋವಿಡ್ -19 ಸೋಂಕು ತಗುಲಿದೆ. ಇದು  ಕೂಡಾ ಅದೇ ರೀತಿಯ ಪ್ರಕರಣವಾಗಿದೆ ಎಂದು ತ್ರಿಸ್ಸೂರ್ ಡಿಎಂಒ ಕೆ ಜೆ ರೀನಾ ತಿಳಿಸಿದ್ದಾರೆ.