ಮಣಿಪಾಲ: ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಕೇಳಿಬಂದಿರುವ ದೇಶದ್ರೋಹದ ಆರೋಪ ಹಾಗೂ ಆ ನಂತರ ನಡೆದ ಪೊಲೀಸ್ ವಿಚಾರಣೆ ಇದೀಗ ರಾಜಕೀಯ ಸ್ವರೂಪ ಪಡೆದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ- ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಏನಿದು ಪ್ರಕರಣ.?
ಕಾರ್ಕಳದ ರಾಧಾಕೃಷ್ಣ ಹಿರ್ಗಾನ ಎಂಬಾತ ವರ್ಷದ ಹಿಂದೆ ಫೇಸ್ ಬುಕ್ ನಲ್ಲಿ ಸೈನಿಕರ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ವಿಚಾರಣೆಗೆ ಕರೆದರೂ ರಾಧಾಕೃಷ್ಣ ವಿಚಾರಣೆ ಹಾಜರಾಗಿಲ್ಲ ಎಂದು ಹೇಳಲಾಗಿದೆ.
ಪೊಲೀಸರಿಂದ ಹಲ್ಲೆ ಆರೋಪ:
ಈ ಪ್ರಕರಣಕ್ಕೆ ಸಂಬಂಧಿಸಿ ರಾಧಾಕೃಷ್ಣ ಹಿರ್ಗಾನರನ್ನು ಕಾರ್ಕಳ ನಗರ ಠಾಣೆ ಎಸ್ ಐ ಮಧು ಅವರು ಠಾಣೆಗೆ ಕರೆಸಿ ಹಲ್ಲೆ ನಡೆಸಿದ್ದಾರೆ. ಇದರಿಂದ ಹಿರ್ಗಾನ ಅವರು ಗಂಭೀರ ಗಾಯಗೊಂಡಿದ್ದು, ಅವರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಹಲ್ಲೆ ನಡೆಸಿಲ್ಲ: ಎಸ್ ಐ
ರಾಧಾಕೃಷ್ಣ ಅವರಿಗೆ ಹಲ್ಲೆ ನಡೆಸಿಲ್ಲ. ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಅವರು ವಿಚಾರಣೆಗೆ ಸಹಕರಿಸಿಲ್ಲ. ಹೀಗಾಗಿ ಎಚ್ಚರಿಕೆ ನೀಡಿದ್ದೇವೆ ಅಷ್ಟೇ. ಆದರೆ ಹೊಡೆದಿಲ್ಲ ಎಂದು ಎಸ್ ಐ ಮಧು ಸ್ಪಷ್ಟನೆ ನೀಡಿದ್ದಾರೆ.
ಅವರ ಮೇಲೆ ದೇಶದ ಯೋಧರ ವಿರುದ್ಧ ಪೋಸ್ಟ್ ಮಾಡಿದ್ದಾರೆ ಎಂಬ ಆರೋಪವಿತ್ತು. ಅದಕ್ಕಾಗಿ ಅವರನ್ಮು ಠಾಣೆಗೆ ಕರೆಸಿ ತನಿಖೆ ನಡೆಸಿದ್ದೇವೆ. ನಾವು ಸರಿಯಾದ ರೀತಿಯಲ್ಲಿ ತನಿಖೆ ಮಾಡಿದ್ದೇವೆ. ನಮ್ಮ ತನಿಖೆ ಕಾನೂನು ಪ್ರಕಾರವಾಗಿದೆ. ನಾವು ಯಾರ ಪರ ಅಥವಾ ವಿರೋಧವಾಗಿ ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಟ್ವೀಟ್:
ಘಟನೆಗೆ ಸಂಬಂಧಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ. ಅವರ ಅನಾರೋಗ್ಯವನ್ನೂ ಲೆಕ್ಕಿಸದೆ, ಹಳೆ ಸುಳ್ಳು ಕೇಸ್ ಆಧರಿಸಿ, ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯರಿಂದ ಸೈನಿಕರಿಗೆ ಅವಮಾನ: ಸುನಿಲ್
ಸಿದ್ದರಾಮಯ್ಯ ಟ್ವೀಟ್ ಗೆ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ತಿರುಗೇಟು ನೀಡಿದ್ದಾರೆ.
ದೇಶ ದ್ರೋಹದ ಪೋಸ್ಟ್ ಹಾಕಿರುವ ತನ್ನ ಪಕ್ಷದ ಕಾರ್ಯಕರ್ತನನ್ನು ಸಮರ್ಥಿಸುವ ಭರದಲ್ಲಿ ಸಿದ್ದರಾಮಯ್ಯ ಯೋಧರಿಗೆ ಅವಮಾನ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ಜಾಲತಾಣದಲ್ಲಿ ಯಾವ ಪೋಸ್ಟ್ ಹಾಕಿದ್ದಾನೆ ಎಂಬುವುದನ್ನು ತಿಳಿಯದೆ ಸಮರ್ಥಿಸಿರುವುದು ಅವರ ಬದ್ಧತೆಯನ್ನು ಪ್ರಶ್ನಿಸುತ್ತದೆ ಎಂದು ಟೀಕಿಸಿದ್ದಾರೆ.
ದೇಶದ್ರೋಹಿ ವ್ಯಕ್ತಿಯನ್ನು ಬೆಂಬಲಿಸುವುದು ನಾಚಿಕೆಗೇಡಿನ ಸಂಗತಿ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ದೇಶದ್ರೋಹದ ಹೇಳಿಕೆ ಕೊಡುವಂತವರನ್ನು ಜೊತೆಯಲ್ಲಿಟ್ಟುಕೊಂಡೆ ಕೆಲಸ ಮಾಡಿದವರು. ಅದು ನಿಮ್ಮ ಕಾಲ. ಆದರೆ ನಮ್ಮ ಕಾಲದಲ್ಲಿ ಅದಕ್ಕೆ ಅವಕಾಶ ಕೊಡುವುದಿಲ್ಲ. ಸೈನಿಕರು, ಸೈನ್ಯದ ಬಗ್ಗೆ ದೇಶದ್ರೋಹದ ಹೇಳಿಕೆ ನೀಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರು ಕಾನೂನು ಪ್ರಕಾರ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸ ಮಾಡಲು ಬಿಡಿ ಎಂದು ಟ್ವೀಟ್ ಮಾಡಿದ್ದಾರೆ.