ಲಾಕ್‌ಡೌನ್‌ ನಿರ್ಬಂಧ ಇನ್ನಷ್ಟು ಸಡಿಲ; ಮಾಲ್‌, ದೇವಸ್ಥಾನಗಳಿಗೆ ಅನುಮತಿ?

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣ ಗಣನೀಯವಾಗಿ ಇಳಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೋವಿಡ್‌ ಲಾಕ್‌ಡೌನ್‌ ನಿಯಮಗಳನ್ನು ಇನ್ನಷ್ಟು ಸಡಿಲಿಕೆ ಮಾಡಲು ತೀರ್ಮಾನಿಸಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಮಾಲ್‌, ದೇವಸ್ಥಾನಗಳನ್ನು ತೆರೆಯುವುದಕ್ಕೆ ಅವಕಾಶ ನೀಡುವ ಸಾಧ್ಯತೆ ಇದ್ದು, ಸಿನಿಮಾ ಮಂದಿರ ತೆರೆಯಲು ಅವಕಾಶ ನೀಡುವ ಸಾಧ್ಯತೆ ಇಲ್ಲ ಎಂದು ಎನ್ನಲಾಗಿದೆ.

ಶಾಲಾ–ಕಾಲೇಜು ತರಗತಿಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿದಂತೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ಸಂಬಂಧ ಸಚಿವರ ಮಧ್ಯೆ ಒಮ್ಮತ ಇಲ್ಲದಿರುವ ಕಾರಣ ಮುಖ್ಯಮಂತ್ರಿಯವರೇ ಸೂಕ್ತ ನಿರ್ದೇಶನಗಳನ್ನು ನೀಡಬಹುದು ಎಂದು ಹೇಳಲಾಗಿದೆ.

ವೀಕೆಂಡ್ ಕರ್ಫ್ಯೂ ರದ್ದು?:
ಪ್ರಸ್ತುತ ಜಾರಿಯಲ್ಲಿ ಇರುವ ಸಂಜೆ 5 ರಿಂದ ಈಗಿರುವ ರಾತ್ರಿ ಕರ್ಫ್ಯೂವನ್ನು ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ಮಾರ್ಪಾಡು ಮಾಡುವ ಸಾಧ್ಯತೆ ಇದೆ. ರಾತ್ರಿ 8 ರವರೆಗೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಬಹುದು. ವಾರಾಂತ್ಯ ಕರ್ಫ್ಯೂ ರದ್ದು ಪಡಿಸುವ ಬಗ್ಗೆಯೂ ಚರ್ಚೆ ನಡೆಯಬಹುದು ಎಂದೂ ಮೂಲಗಳಿಂದ ತಿಳಿದುಬಂದಿದೆ.

ದೇವಸ್ಥಾನ ತೆರೆಯಲು ಅವಕಾಶ: 
ಕೆಲವು ಸುರಕ್ಷತಾ ಕ್ರಮಗಳನ್ನು ವಿಧಿಸಿ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಸೋಂಕು ಕಡಿಮೆ ಇರುವ ಕಡೆಗಳಲ್ಲಿ ದೇವಸ್ಥಾನಗಳನ್ನು ತೆರೆಯಲು ಅವಕಾಶ ನೀಡಬಹುದು. ಆದರೆ, ಉತ್ಸವ, ಜಾತ್ರೆ, ಅನ್ನದಾನ, ಪ್ರಸಾದ ವಿತರಣೆಗಳ ಮೇಲಿನ ನಿಷೇಧ ಮುಂದುವರಿಯಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.