ಡೆಲ್ಟಾ ರೂಪಾಂತರ ತಳಿಯ ಸೋಂಕು ಹೆಚ್ಚುವ ಸಾಧ್ಯತೆ: ವಿಶ್ವಸಂಸ್ಥೆ ಆರೋಗ್ಯ ಸಂಸ್ಥೆ ಎಚ್ಚರಿಕೆ

ಜಿನಿವಾಕೊರೊನಾ ಸೋಂಕಿನ ರೂಪಾಂತರ ತಳಿ ‘ಡೆಲ್ಟಾ ವೈರಸ್’ ವಿಶ್ವದ 100 ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ರೂಪಾಂತರ ತಳಿಯ ಸೋಂಕು ಎಲ್ಲೆಡೆ ಹರಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಕೋವಿಡ್‌–19 ಪಿಡುಗು ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ವಾರದ ದತ್ತಾಂಶ ಪ್ರಕಟಿಸಿದ್ದು, ಅದರಂತೆ ಜೂನ್ 29 ರವರೆಗೆ, 96 ದೇಶಗಳಲ್ಲಿ ಡೆಲ್ಟಾ ರೂಪಾಂತರ ತಳಿಯ ಸೋಂಕು ಪ್ರಸರಣಗೊಂಡಿದೆ. ರೂಪಾಂತರ ತಳಿಗಳ ಪತ್ತೆಗೆ ಅಗತ್ಯವಾದ ಪರಿಕರಗಳ ಕೊರತೆಯ ಕಾರಣವೂ ಡೆಲ್ಟಾ ರೂಪಾಂತರ ತಳಿ ವಿಶ್ವದ ಹಲವು ಭಾಗಗಳಿಗೆ ತೀವ್ರವಾಗಿ ವ್ಯಾಪಿಸಲು ಕಾರಣವಾಗಿದೆ ಎಂದಿದೆ.

ಡೆಲ್ಟಾ ರೂಪಾಂತರ ತಳಿ ಪ್ರಸರಣದ ವೇಗವನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಈಗಿನ ಎಲ್ಲ ರೂಪಾಂತರ ತಳಿಗಳನ್ನು ಇದು ಮೀರಿಸಿ, ಪ್ರಬಲವಾದ ರೂಪಾಂತರ ತಳಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಕೋವಿಡ್‌– 19 ರೂಪಾಂತರ ತಳಿಯ ಸೋಂಕಿನ ಪ್ರಸರಣ ಹೆಚ್ಚುತ್ತಿರುವ ಸ್ಥಳಗಳಲ್ಲಿ ದೀರ್ಘಕಾಲದವರೆಗೆ ಕೋವಿಡ್ ಸುರಕ್ಷತಾ ಕ್ರಮಗಳನ್ನು ದೀರ್ಘಕಾಲದವರೆಗೆ ಮುಂದುವರಿಸಬೇಕಾಗುತ್ತದೆ. ಕೋವಿಡ್‌ ಲಸಿಕೆ ಪಡೆಯವವರ ಸಂಖ್ಯೆ ಕಡಿಮೆ ಇರುವ ಪ್ರದೇಶಗಳಲ್ಲಿ ಇಂಥ ಕ್ರಮಗಳನ್ನು ಕಡ್ಡಾಯವಾಗಿ ಮುಂದುವರಿಸಬೇಕು. ಲಸಿಕೆ ನೀಡುವ ಪ್ರಕ್ರಿಯೆಯನ್ನು ವೇಗವಾಗಿ ಪೂರ್ಣಗೊಳಿಸಬೇಕು ಎಂದು ಡಬ್ಲ್ಯುಎಚ್‌ಒ ಸಲಹೆ ನೀಡಿದೆ.