ಉಡುಪಿ: ಕೊರೊನಾ ಸೋಂಕಿತರ ಮನೆ ಸೀಲ್‌ಡೌನ್‌ ಬದಲು ಕಂಟೈನ್‌ಮೆಂಟ್ ಝೋನ್

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರವು ನಿರೀಕ್ಷಿತ ಪ್ರಮಾಣದಲ್ಲಿ ಇಳಿಕೆ ಆಗದಿರಲು ಬಹುತೇಕ ಮಂದಿ ಹೋಮ್ ಐಸೋಲೇಶನ್‌ನಲ್ಲಿ ಇರುವುದೇ ಕಾರಣ. ಹಾಗಾಗಿ ಮನೆಯಲ್ಲಿರುವ ಸೋಂಕಿತರನ್ನು ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವ ಕಾರ್ಯ ಮಾಡಬೇಕು. ಕೇವಲ ಸೋಂಕಿತರ ಮನೆ ಸೀಲ್‌ಡೌನ್ ಮಾಡುವುದನ್ನು ಬಿಟ್ಟು ಸುತ್ತಲಿನ ನಾಲ್ಕೈದು ಮನೆಗಳನ್ನು ಸೇರಿಸಿ ಕಂಟೈನ್‌ಮೆಂಟ್ ಝೋನ್ ಮಾಡಬೇಕು ಎಂದು ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ 815 ಮಂದಿಯನ್ನು ಹೋಮ್ ಐಸೋಲೇಶನ್‌ನಲ್ಲಿ ಇಟ್ಟಿರುವುದು ಸರಿಯಾದ ಕ್ರಮವಲ್ಲ. ಇಲ್ಲದಿದ್ದರೆ ಎರಡು ವಾರಗಳ ಹಿಂದೆಯೇ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಇಳಿಕೆಯಾಗುತ್ತಿತ್ತು. ಮನೆಯಲ್ಲಿರುವ ಸೋಂಕಿತರು ಹೊರಗಡೆ ತಿರುಗಾಡುತ್ತಿರುವುದರಿಂದ ಸೋಂಕು ಹರಡಲು ಪ್ರಮುಖ ಕಾರಣ. ಆದುದರಿಂದ ಈ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಮೂರನೇ ಅಲೆ ಎದುರಿಸಲು ಸಜ್ಜಾಗಿ:
ಜಿಲ್ಲೆಯಲ್ಲಿ ಕೊವಿಡ್ 3ನೆ ಅಲೆಯನ್ನು ಸಮರ್ಥವಾಗಿ ತಡೆಯುವ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಒಟ್ಟು 50 ಮಕ್ಕಳ ಐಸಿಯು ಬೆಡ್‌ಗಳನ್ನು ವೆಂಟಿಲೇಟರ್ ಸಹಿತ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಸಿದ್ಧಪಡಿ ಸಿಟ್ಟುಕೊಳ್ಳಬೇಕು. ಆಕ್ಸಿಜನ್ ಜನರೇಟರ್‌ಗಳ ಅಳವಡಿಕೆ ಕಾರ್ಯವನ್ನು ಸಂಪೂರ್ಣಗೊಳಿಸಿ ಅವುಗಳ ಕಾರ್ಯಾರಂಭ ಮಾಡಬೇಕು ಎಂದು ಸಚಿವರು ಸೂಚನೆ ನೀಡಿದರು.