ಕೊರೊನಾ ರೂಪಾಂತರಿ ತಳಿ ‘ಡೆಲ್ಟಾ ಪ್ಲಸ್‌’ ಸೋಂಕಿಗೆ ಮಹಿಳೆ ಬಲಿ

ಭೋಪಾಲ್: ಕೋವಿಡ್ ಎರಡನೇ ಅಲೆಯ ಆರ್ಭಟ ಕೊಂಚ ಕಡಿಮೆಯಾಯ್ತು ಎನ್ನುವಾಗಲೇ ದೇಶದಲ್ಲಿ ಕೊರೊನಾ ವೈರಸ್‌ ರೂಪಾಂತರಿ ತಳಿ ‘ಡೆಲ್ಟಾ ಪ್ಲಸ್‌’ ಸೋಂಕಿನ ಭೀತಿ ಉಂಟಾಗಿದೆ.

ಮಧ್ಯಪ್ರದೇಶದಲ್ಲಿ ಐವರಲ್ಲಿ ಡೆಲ್ಟಾ ಪ್ಲಸ್ ಸೋಂಕು ದೃಢಪಟ್ಟಿದ್ದು, ಅವರಲ್ಲಿ ಒಬ್ಬರು ಮಹಿಳೆ ಮೃತಪಟ್ಟಿದ್ದಾರೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್‌ ಸರಂಗ್ ಗುರುವಾರ ತಿಳಿಸಿದ್ದಾರೆ

ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದ ಇತರ ನಾಲ್ವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮರಣ ಹೊಂದಿದ ವ್ಯಕ್ತಿ ಉಜ್ಜೈನಿ ಮೂಲದವರಾಗಿದ್ದು, ಅವರು ಲಸಿಕೆ ಪಡೆದಿರಲಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಉಜ್ಜೈನಿಯ 59 ವರ್ಷದ ಮಹಿಳೆ ಮೇ 23ರಂದು ಮೃತರಾಗಿದ್ದರು. ಅವರಿಗೆ ಮೇ 17ರಂದು ಕೋವಿಡ್‌ ದೃಢಪಟ್ಟಿತ್ತು. ಅವರಿಗೆ ರೂಪಾಂತರಿತ ತಳಿಯಾದ ‘ಡೆಲ್ಟಾ ಪ್ಲಸ್‌’ನಿಂದ ಸೋಂಕು ತಗುಲಿರುವುದು ಮಂಗಳವಾರ ಗೊತ್ತಾಗಿದೆ ಎಂದು ಉಜ್ಜೈನಿಯ ಜಿಲ್ಲಾಧಿಕಾರಿ ಆಶಿಶ್‌ ಸಿಂಗ್‌ ಹೇಳಿದ್ದಾರೆ.