ಮಣಿಪಾಲ: ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ಕರೆ ಮಾಡಿ ಕೂಲಿಕಾರ್ಮಿಕನ ಖಾತೆಯಿಂದ ₹30 ಸಾವಿರ ಲಪಟಾಯಿಸಿದ ವಂಚಕ.!

ಮಣಿಪಾಲ: ವಂಚಕನೊಬ್ಬ ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ಕರೆ ಮಾಡಿ ವ್ಯಕ್ತಿಯೊಬ್ಬರ ಖಾತೆಯಿಂದ ₹ 30 ಸಾವಿರ ಲಪಟಾಯಿಸಿದ ಘಟನೆ ಅಲೆವೂರು ಗ್ರಾಮದ ಪ್ರಗತಿನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಪ್ರಗತಿನಗರದ ಕೂಲಿಕಾರ್ಮಿಕರೊಬ್ಬರಿಗೆ ಇಂದು ಬೆಳಿಗ್ಗೆ ಅಪರಿಚಿತ ವ್ಯಕ್ತಿಯೊಬ್ಬರು‌ ಕರೆ ಮಾಡಿದ್ದು, ತಾನು ಸಿಂಡಿಕೇಟ್ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ನಿಮ್ಮ ಎಟಿಎಮ್ ಕಾರ್ಡ್ ಬ್ಲಾಕ್ ಆಗಿದ್ದು, ಅದನ್ನು ಸರಿಪಡಿಸಲು ನಿಮ್ಮ ದಾಖಲೆ ನೀಡಬೇಕು ಎಂದಿದ್ದಾನೆ. ಅದರಂತೆ ಕೂಲಿಕಾರ್ಮಿಕ ತನ್ನ ಬ್ಯಾಂಕ್ ಖಾತೆಯ ಮಾಹಿತಿಯನ್ನು ವಂಚಕನಿಗೆ ತಿಳಿಸಿದ್ದಾನೆ. ಅಲ್ಲದೆ, ತನ್ನ ಮೊಬೈಲ್ ಗೆ ಬಂದ ಒಟಿಪಿಯನ್ನು ಕೂಡ ಹೇಳಿದ್ದಾನೆ. ಅದಾದ ಕೆಲವೇ ಕ್ಷಣಗಳಲ್ಲಿ ಕೂಲಿ ಕಾರ್ಮಿಕನ ಖಾತೆಯಲ್ಲಿದ್ದ ಒಟ್ಟು ₹30 ಸಾವಿರ ವಂಚಕನ ಖಾತೆಗೆ ವರ್ಗಾವಣೆಗೊಂಡಿದೆ.

ಇಷ್ಟಾದರೂ ಅಮಾಯಕ ಕೂಲಿಕಾರ್ಮಿಕನಿಗೆ ತನ್ನ ಖಾತೆಯಲ್ಲಿ ಹಣ ಡ್ರಾ ಆಗಿರುವ ಬಗ್ಗೆ ಗಮನಕ್ಕೆ ಬಂದಿಲ್ಲ. ಬ್ಯಾಂಕ್ ತೆರಳಿ ಪರಿಶೀಲನೆ ನಡೆಸಿದ ಬಳಿಕವೇ ಕೂಲಿ ಕಾರ್ಮಿಕನಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ತನಗೆ ಕರೆ ಮಾಡಿದ್ದು ಬ್ಯಾಂಕ್ ಮ್ಯಾನೇಜರ್ ಅಲ್ಲ, ವಂಚಕ ಎಂಬುದು ತಿಳಿದಿದೆ. ವಂಚಕ ಬೀಸಿದ ಬಲೆಗೆ ಸಿಲುಕಿದ ಅಮಾಯಕ ಕಾರ್ಮಿಕ ತಾನೂ ಕಷ್ಟಪಟ್ಟು ಕೂಡಿಟ್ಟ ಹಣವನ್ನು‌ ಕಳೆದುಕೊಂಡು, ತಲೆ ಮೇಲೆ ಕೈ ಇಟ್ಟು ಕೂರುವಂತಾಗಿದೆ.