ಮಣಿಪಾಲ: ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ಅಪಾರ ಹಾನಿ

ಮಣಿಪಾಲ: ಅಡುಗೆ ಮಾಡುತ್ತಿದ್ದ ವೇಳೆ ಅನಿಲ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡ ಘಟನೆ ಮಣಿಪಾಲ ಅನಂತ ನಗರದ ಸೋನಿ ಕ್ಲಿನಿಕ್ ನ ಹಿಂಬದಿಯಲ್ಲಿ ಇರುವ ಮನೆಯೊಂದರಲ್ಲಿ ಬುಧವಾರ ರಾತ್ರಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ .

ಸಿಲಿಂಡರ್ ನಲ್ಲಿ ಅನಿಲ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡಿತ್ತು. ಮನೆಯವರು ಒದ್ದೆ ಬಟ್ಟೆಗಳನ್ನು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಅದು ನಿಯಂತ್ರಣಕ್ಕೆ ಬಂದಿಲ್ಲ. ಏಕಾಏಕಿಯಾಗಿ ಸಿಲಿಂಡರ್ ಗೆ ಬೆಂಕಿ‌ ಹತ್ತಿಕೊಂಡಿದೆ. ಕೂಡಲೇ ಎಚ್ಚೆತ್ತ ಮನೆಯವರು‌ ಮನೆಯಿಂದ ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

ಅದಾದ ಬಳಿಕ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಮನೆಯಲ್ಲಿರುವ ವಸ್ತುಗಳಿಗೆ ಹಾನಿಯಾಗಿದೆ. ತಕ್ಷಣವೇ ಅಗ್ನಿ ಶಾಮಕ ಇಲಾಖೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ  ಆಗುವುದನ್ನು ತಪ್ಪಿಸಿದ್ದಾರೆ.