ಮಂಗಳೂರು: ತುಳು ಭಾಷೆಯನ್ನು ಕರ್ನಾಟಕ ಮತ್ತು ಕೇರಳದಲ್ಲಿ ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಜೈ ತುಳುನಾಡು ಸೇರಿದಂತೆ ಇತರೇ ಸಂಘಟನೆಗಳು ಮತ್ತು ತುಳು ಭಾಷಿಗರು ಭಾನುವಾರ ಆರಂಭಿಸಿದ ಟ್ವಿಟರ್ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ.
ಇಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಹಮ್ಮಿಕೊಂಡಿರುವ ಟ್ವೀಟ್ ಅಭಿಯಾನಕ್ಕೆ ಸಾವಿರಾರು ಮಂದಿ ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದಾರೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ 1 ಲಕ್ಷಕ್ಕೂ ಹೆಚ್ಚಿನ ಟ್ವೀಟ್ ಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ತುಳುಭಾಷೆಯ ಸ್ಥಾನಮಾನಕ್ಕಾಗಿ ಈ ಹಿಂದೆಯೂ ಸಾಕಷ್ಟು ಮನವಿ, ಅಭಿಯಾನಗಳು ನಡೆದಿವೆ. ತುಳು ಸಾಹಿತ್ಯ ಅಕಾಡೆಮಿ, ವಿವಿಧ ಸಂಘಟನೆ, ಜನಪ್ರತಿನಿಧಿಗಳು ರಾಜ್ಯ, ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು. ಆದರೆ ಸರಕಾರ ಮಾತ್ರ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಈ ಬಾರಿಯಾದರೂ ಸರ್ಕಾರ ಎಚ್ಚೆತ್ತುಕೊಂಡು ತುಳು ಭಾಷೆಗೆ ಸೂಕ್ತ ಸ್ಥಾನಮಾನ ಕಲ್ಪಿಸಲಿದೆಯೇ ಎಂಬುವುದನ್ನು ಕಾದುನೋಡಬೇಕಿದೆ.