ಜೊಹಾನ್ಸ್‌ಬರ್ಗ್: ಹಣಕಾಸು ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಮಾಡಿದ ಆರೋಪಕ್ಕೆ ಸಂಬಂಧಿಸಿ ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದ ಡರ್ಬನ್ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಗಾಂಧಿ ಮರಿ ಮೊಮ್ಮಗಳು ಆಶಿಶ್ ಲತಾ ರಾಮ್‌ಗೋಬಿನ್ (56) ಶಿಕ್ಷೆಗೆ ಗುರಿಯಾಗಿದ್ದಾರೆ. ಇವರು ಆರು ದಶಲಕ್ಷ ಆಫ್ರಿಕನ್ ರಾಂಡ್ ( ಅಂದಾಜು ₹3.22 ಕೋಟಿ) ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿದ ಆರೋಪ ಎದುರಿಸುತ್ತಿದ್ದಾರೆ.
ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ತಾವು ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಕಸ್ಟಂ ಸುಂಕಕ್ಕಾಗಿ ದಕ್ಷಿಣ ಆಫ್ರಿಕಾದ ಉದ್ಯಮಿ ಎಸ್.ಆರ್ ಮಹರಾಜ್ ಎಂಬುವವರ ಬಳಿ ಲತಾ 6.2 ದಶಲಕ್ಷ ರಾಂಡ್ ಪಡೆದಿದ್ದರು. ತಾವು ಗಳಿಸಿದ ಆದಾಯದಲ್ಲಿ ಪಾಲು ನೀಡುವುದಾಗಿ ಹೇಳಿದ್ದ ಲತಾ ನಂತರದಲ್ಲಿ ಉದ್ಯಮಿಗೆ ವಂಚಿಸಿದ್ದ ಆರೋಪ ಎದುರಿಸುತ್ತಿದ್ದರು.
ಪ್ರಕರಣದಲ್ಲಿ ಲತಾ ಅವರಿಗೆ ಶಿಕ್ಷೆ ವಿಧಿಸಿರುವ ಡರ್ಬನ್ ವಾಣಿಜ್ಯ ವ್ಯಾಜ್ಯಗಳ ವಿಶೇಷ ನ್ಯಾಯಾಲಯ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾಲಾವಕಾಶವನ್ನೂ ನಿರಾಕರಿಸಿದೆ.