ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರು ಇಂದು ದಿಢೀರ್ ಆಗಿ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿದ ಶಿಲ್ಪಾನಾಗ್ ಅವರು, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹಲವು ಆರೋಪಗಳ ಸುರಿಮಳೆಗೈದಿದ್ದಾರೆ.
ಪಾಲಿಕೆ ವಿರುದ್ಧ ಸಮರ ಸಾರುತ್ತಿದ್ದಾರೆ. ನಗರಕ್ಕೆ ಒಂದು ಮಾನದಂಡ, ಗ್ರಾಮಾಂತರಕ್ಕೆ ಒಂದು ಮಾನದಂಡ ಮಾಡಿದ್ದಾರೆ. ಸಿಟಿಯಲ್ಲಿ ಕಮಿಷನರ್ ವಿಫಲವಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳುತ್ತಿದ್ದಾರೆ. ಏನೂ ಕೆಲಸ ಮಾಡಿಲ್ಲ ಎಂಬ ಪಟ್ಟಕಟ್ಟಿದ್ದಾರೆ ಎಂದು ಬೇಸರ ಹೊರಹಾಕಿದರು.
ಜಿಲ್ಲಾಡಳಿತದಿಂದ ನಮಗೆ ಯಾವುದೇ ಸಹಕಾರ ದೊರೆತಿಲ್ಲ. ಸಿಎಸ್ಆರ್ ಫಂಡ್ನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲರಿಗೂ ಒಂದು ಸಹನೆ ಇರುತ್ತೆ, ಸಹನೆ ಒಡೆದಾಗ ಏನು ಮಾಡಬೇಕು..? ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ..? ನನ್ನನ್ನು ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದೆ. ಅವರ ಈಗೋದಿಂದಾಗಿ ನಾವು ಮಾಡುವ ಕೆಲಸಕ್ಕೆ ಮನ್ನಣೆ ಸಿಗ್ತಿಲ್ಲ ಎಂದು ಹೇಳಿದರು.
ಮಾಧ್ಯಮಗಳಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ನನ್ನನ್ನ ಟಾರ್ಗೆಟ್ ಮಾಡಲಾಗಿದೆ. ಅನ್ಯ ಮಾರ್ಗವಿಲ್ಲದೆ ನಾನು ಮಾಧ್ಯಮಗಳ ಮುಂದೆ ಬಂದಿದ್ದೇನೆ. ಪ್ರತಿ ದಿನ ನೋಟೀಸ್, ಅವಮಾನ, ಅಪಚಾರ ಮಾಡುತ್ತಿದ್ದಾರೆ.
ಫೈನಲ್ ಆಗಿ ನನ್ನ ನೋವನ್ನ ಹೇಳಬೇಕೆಂದು ಬಂದಿದ್ದೇನೆ. ನಾನು ಐಎಎಸ್ ಅಧಿಕಾರಿಯಾಗಿ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಯಾವುದೇ ಜಿಲ್ಲೆಗೂ ಇಂತಹ ಜಿಲ್ಲಾಧಿಕಾರಿಗಳು ಬೇಡ. ಅವರ ದುರಂಕಾರದಿಂದ ಈ ರೀತಿ ಪರಿಸ್ಥಿತಿ ಬಂದಿದೆ ಎಂದು ಶಿಲ್ಪಾ ನಾಗ್ ರಾಜೀನಾಮೆ ಘೋಷಿಸಿದ್ದಾರೆ. ಅಲ್ಲದೇ ಐಎಎಸ್ ಅಧಿಕಾರಿ ಹುದ್ದೆಗೂ ರಾಜೀನಾಮೆ ಕೊಡುತ್ತಿದ್ದೇನೆ ಎಂದಿದ್ದಾರೆ.