ಉಡುಪಿ ಡಿಸಿಗೆ ನಕಲಿ ಫೇಸ್ ಬುಕ್ ಖಾತೆಯ ಹಾವಳಿ: ದೂರು ದಾಖಲು

ಉಡುಪಿ: ಜಿಲ್ಲಾಧಿಕಾರಿ ಜಿ. ಜಗದೀಶ ಅವರಿಗೆ ಮತ್ತೆ ನಕಲಿ ಫೇಸ್ ಬುಕ್ ಖಾತೆಯ ಹಾವಳಿ ಶುರುವಾಗಿದೆ. ಯಾರೋ ಕಿಡಿಗೇಡಿಗಳು ಮತ್ತೆ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದಿದ್ದಾರೆ. ಈ ಬಗ್ಗೆ ಉಡುಪಿ ಸೆನ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೇ 31ರಂದು ಕಿಡಿಗೇಡಿಗಳು ‘ಡಿಸಿ ಉಡುಪಿ'(DC Udupi) ಎಂಬ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ಸೃಷ್ಟಿಸಿದ್ದು, ಪ್ರೊಫೈಲಿಗೆ ಜಿಲ್ಲಾಧಿಕಾರಿಗಳ ಫೋಟೋವನ್ನು ಹಾಕಿದ್ದಾರೆ.

ಅಲ್ಲದೆ, ಈ ನಕಲಿ ಖಾತೆಯ ಮೂಲಕ‌ ಸಾರ್ವಜನಿಕರಿಗೆ ಸಂದೇಶ ಕಳುಹಿಸಿ ಹಣ ಪೀಕಲು ಯತ್ನಿಸಿದ್ದಾರೆ. ಇದರಿಂದ ಡಿಸಿಯವರ ವೈಯಕ್ತಿಕ ಗೌರವಕ್ಕೆ ದಕ್ಕೆ ಉಂಟಾಗಿದೆ.‌ ಈ ಕುರಿತು ಕಿಡಿಗೇಡಿಗಳ ವಿರುದ್ಧ ಉಡುಪಿ ಸೆನ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆಯೂ ಎರಡು ಬಾರಿ ಉಡುಪಿ ಡಿಸಿ ಅವರ ಹೆಸರಿನಲ್ಲಿ‌ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದರು. ಇದೀಗ ಮತ್ತೆ ನಕಲಿ ಖಾತೆ ಸೃಷ್ಟಿಸಿದ್ದಾರೆ.