ಮಂಗಳೂರು-ಉಡುಪಿ: ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ಹಾಲು ಉತ್ಪಾದನೆ ಅಧಿಕವಾಗಿದ್ದು, ಲಾಕ್‍ಡೌನ್ ಪರಿಣಾಮ ಶುಭ-ಸಮಾರಂಭ, ದೇವಸ್ಥಾನ, ವಿದ್ಯಾ ಸಂಸ್ಥೆ ಹಾಸ್ಟೆಲ್, ಹೋಟೆಲ್‍ಗಳಿಗೆ ನಿರ್ಬಂಧವಿರುವುದರಿಂದ ಹಾಲು ಮತ್ತು ಮೊಸರು ಮಾರಾಟದಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ರಾಜ್ಯಾದ್ಯಂತ ಕೊರೋನಾ ಸೋಂಕಿನ 2ನೇ ಅಲೆಯು ತೀವ್ರವಾಗಿದ್ದು, ದಿನಾಂಕ 28.04.2021ರಿಂದ ಲಾಕ್‍ಡೌನ್ ಇರುವ ಹಿನ್ನೆಲೆಯಲ್ಲಿ, ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಕೂಡಾ ಹಾಲು ಉತ್ಪಾದಕರು ಸಂಘಗಳಿಗೆ ಗುಣಮಟ್ಟದ ಹಾಲನ್ನು ಪೂರೈಸುತ್ತಿದ್ದು, “ನಂದಿನಿ” ಬಳಗವು ಜೀವಭಯ ತೊರೆದು, ಗ್ರಾಹಕರಿಗೆ ಅಗತ್ಯ ಸೇವೆಗಳಲ್ಲೊಂದಾದ ಹಾಲು ಪೂರೈಸುವ ಮೂಲಕ ಗ್ರಾಹಕರ ಸೇವೆಯಲ್ಲಿ ತೊಡಗಿದ್ದಾರೆ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೊಡವೂರು ರವಿರಾಜ ಹೆಗ್ಡೆ ಅವರು ತಿಳಿಸಿದ್ದಾರೆ.
“ಹೆಚ್ಚು ಹಾಲು ಕುಡಿಯಿರಿ” ಯೋಜನೆ
ಹಾಲನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡುವ ಹಿನ್ನೆಲೆಯಲ್ಲಿ ಹಾಗೂ ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ದಿನಾಂಕ 01.06.2021 ರಿಂದ 30.06.2021ರವರೆಗೆ ಎಲ್ಲಾ ಮಾದರಿಯ ನಂದಿನಿ 500 ಮಿ.ಲೀ. ಹಾಗೂ 1 ಲೀ. ಹಾಲಿನ ಪೊಟ್ಟಣಗಳ ಮೇಲೆ ತಲಾ 20 ಮಿ.ಲೀ. ಹಾಗೂ 40 ಮಿ.ಲೀ. ಹಾಲನ್ನು ಉಚಿತವಾಗಿ ಗ್ರಾಹಕರಿಗೆ ನೀಡಿ “ಹೆಚ್ಚು ಹಾಲು ಕುಡಿಯಿರಿ” ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಂಡು ಆರೋಗ್ಯ ವೃದ್ಧಿಸಿ, ಸದೃಢರಾಗುವಂತೆ ಅವರು ತಿಳಿಸಿದ್ದಾರೆ.
ಕಹಾಮ ಅಧೀನದಲ್ಲಿರುವ 14 ಒಕ್ಕೂಟಗಳಲ್ಲಿ ಏಕಕಾಲಕ್ಕೆ 1 ಲೀಟರ್ ಹಾಲಿನ ಖರೀದಿಗೆ 40 ಮಿ.ಲೀ. ಉಚಿತ ಹಾಲು ಯೋಜನೆ ಜಾರಿಯಾಗುತ್ತಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಂಡು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹೆಚ್ಚು ಬಳಸಲು ಕರೆ ನೀಡುತ್ತಾ, ಒಕ್ಕೂಟದ ಸಿಬ್ಬಂದಿಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳನ್ನು “ಕೊರೋನಾ ವಾರಿಯರ್ಸ್” ಎಂದು ಗುರುತಿಸಲು ಕರ್ನಾಟಕ ಹಾಲು ಮಹಾಮಂಡಳಿ ಮತ್ತು ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿಯವರು ಕಹಾಮ ಮೂಲಕ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.












