ಮುಂಬೈ: ಕೊರೊನಾ ಸರಪಳಿಯನ್ನು ಸಂಪೂರ್ಣವಾಗಿ ಮುರಿಯಲು ಜೂನ್ 15ರವರೆಗೆ ಮತ್ತೆ ಕಠಿಣ ಲಾಕ್ ಡೌನ್ ನಿರ್ಬಂಧವನ್ನು ವಿಸ್ತರಿಸಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.
ನಗರಪಾಲಿಕೆ, ಪುರಸಭೆ, ಜಿಲ್ಲೆಗಳಲ್ಲಿನ ಪಾಸಿಟಿವ್ ದರ ನೋಡಿಕೊಂಡು, ಆಕ್ಸಿಜನ್ ಬೆಡ್ ಗಳ ಲಭ್ಯತೆ ನೋಡಿಕೊಂಡು ನಿರ್ಬಂಧವನ್ನು ಕಠಿಣಗೊಳಿಸುವ ಅಥವಾ ಮುಂದುವರಿಸುವ ನಿರ್ಧಾರ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ.
ನಗರ ಪಾಲಿಕೆ ಮತ್ತು ಜಿಲ್ಲೆಗಳ ಸ್ಥಳೀಯ ಮಟ್ಟದಲ್ಲಿ ಕೊರೊನಾ ಪಾಸಿಟಿವ್ ದರ ಶೇ. 10ಕ್ಕಿಂತ ಕಡಿಮೆಯಿದ್ದರೆ ಅಲ್ಲಿ ಆಕ್ಸಿಜನ್ ಬೆಡ್ ಗಳ ಲಭ್ಯತೆ ಶೇಕಡಾ 40ಕ್ಕಿಂತ ಕಡಿಮೆಯಿದ್ದರೆ ಅಗತ್ಯ ವಸ್ತುಗಳು ಮತ್ತು ಸೇವೆಗಳ ಲಭ್ಯತೆಗೆ ಸರ್ಕಾರ ಈಗಿರುವ 7ರಿಂದ 11 ಗಂಟೆಯವರೆಗಿನ ವಿನಾಯ್ತಿಯನ್ನು ಮುಂದಿನ ದಿನಗಳಲ್ಲಿ 7 ಗಂಟೆಯಿಂದ 2 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗುವುದು ಎಂದು ಸರ್ಕಾರ ಭಾನುವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಶೇಕಡಾ 20ಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ದರ ಹೊಂದಿರುವ ಜಿಲ್ಲೆಗಳು ಮತ್ತು ನಗರ ಪಾಲಿಕೆಗಳಲ್ಲಿ ಮತ್ತು ಶೇ. 75ಕ್ಕಿಂತ ಹೆಚ್ಚು ಆಕ್ಸಿಜನ್ ಬೆಡ್ ಗಳು ಸಿಗುವ ಜಿಲ್ಲೆಗಳ ಗಡಿ ಜಿಲ್ಲೆಗಳನ್ನು ಮುಚ್ಚಲಾಗುತ್ತದೆ ಹಾಗೂ ಇಂತಹ ಜಿಲ್ಲೆಗಳಿಗೆ ಬಂದು ಹೋಗಲು ಅವಕಾಶವಿರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ ಈಗ 2ಲಕ್ಷದ 71 ಸಾವಿರದ 801 ಸಕ್ರಿಯ ಪ್ರಕರಣಗಳಿವೆ. ನಿನ್ನೆಯ ಹೊತ್ತಿಗೆ ಮಹಾರಾಷ್ಟ್ರದಲ್ಲಿ ಕೋವಿಡ್ ನಿಂದ ಇಲ್ಲಿಯವರೆಗೆ 94 ಸಾವಿರದ 844 ಮಂದಿ ಮೃತಪಟ್ಟಿದ್ದಾರೆ.












