ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆಗಳನ್ನು ನಡೆಸುವುದು ಉತ್ತಮ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಆಯೋಜಿಸಿದ್ದ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ಮಾತನಾಡಿದರು. ವೃತ್ತಿಪರ ಶಿಕ್ಷಣಕ್ಕೆ ಅಣಿಯಾಗುವ ಹಂತದಲ್ಲಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಯಾವುದಾದರೂ ಮಾದರಿಯಲ್ಲಿ ಪರೀಕ್ಷೆಗಳನ್ನು ನಡೆಸಬೇಕಾದ್ದು ಅನಿವಾರ್ಯ. ದ್ವಿತೀಯ ಪಿಯು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ. ಅತ್ಯಂತ ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಪೂರ್ವಸಿದ್ಧತೆಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಒಂದು ವೇಳೆ ಜುಲೈ ತಿಂಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾದರೆ, ಆಗಸ್ಟ್ ತಿಂಗಳಲ್ಲಿ ಫಲಿತಾಂಶವನ್ನು ಘೋಷಿಸಲು ಸಾಧ್ಯವಾಗುತ್ತದೆ. ಹೀಗಾಗಿ ನೀಟ್, ಜೆಇಇ, ಸಿಇಟಿ, ಐಸಿಎಆರ್ ಅಂಥ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಗಸ್ಟ್ ತಿಂಗಳ ಸೂಕ್ತ ದಿನಾಂಕಗಳಂದು ಆಯೋಜಿಸಬಹುದು’ ಎಂದು ಅವರು ಸಲಹೆ ನೀಡಿದರು.