ಉಡುಪಿ: ಜಿಲ್ಲೆಯ ಸ್ಥಳೀಯ ಕ್ಲಿನಿಕ್ ಅಥವಾ ವೈದ್ಯರು ತಮ್ಮಲ್ಲಿಗೆ ಬರುವ ರೋಗಿಗಳಲ್ಲಿ ಕೊರೊನಾ ಲಕ್ಷಣ ಕಂಡುಬಂದಲ್ಲಿ ಅವರಿಗೆ ತಾತ್ಕಾಲಿಕ ಉಪಶಮನದ ಚಿಕಿತ್ಸೆ, ಔಷಧ ನೀಡಬಾರದು. ಅವರನ್ನು ಕೂಡಲೇ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಸ್ಥಳೀಯ ಕ್ಲಿನಿಕ್ ಅಥವಾ ವೈದ್ಯರು ಕೊರೊನಾ ಸೋಂಕಿನ ಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ನೀಡಿ, ಬಳಿಕ ರೋಗ ಉಲ್ಬಣಗೊಂಡು ರೋಗಿಗಳು ಮೃತಪಟ್ಟ ಪ್ರಕರಣಗಳು ಕಂಡುಬಂದಲ್ಲಿ ಅಂತಹ ವೈದ್ಯರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳು 2020 ರ ಕಾಯಿದೆ ಅಡಿ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು. ಅಲ್ಲದೆ, ಅಂತಹ ಕ್ಲಿನಿಕ್, ವೈದ್ಯರ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕಿತರು ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಜನರು ಆರಂಭದಲ್ಲಿ ಕೋವಿಡ್ ಸೋಂಕಿನ ಲಕ್ಷಣಗಳಾದ ಜ್ವರ, ಶೀತ, ಕೆಮ್ಮು ಮುಂತಾದವುಗಳು ಕಾಣಿಸಿಕೊಂಡಂತಹ ಸಂದರ್ಭದಲ್ಲಿ ಸ್ಥಳೀಯ ಕ್ಲಿನಿಕ್ ಅಥವಾ ಹತ್ತಿರದ ವೈದ್ಯರ ಬಳಿ ಔಷಧಿ ಪಡೆಯುತ್ತಿದ್ದು, ರೋಗ ಉಲ್ಬಣಗೊಂಡ ನಂತರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ಕೆಲವು ರೋಗಿಗಳು ರೋಗ ತೀವ್ರ ಉಲ್ಬಣಗೊಂಡ ಬಳಿಕ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಮರಣ ಹೊಂದುತ್ತಿದ್ದಾರೆ. ಹೀಗಾಗಿ ಕೋವಿಡ್ ಲಕ್ಷಣಗಳು ಕಂಡುಬಂದಂತಹ ಸಂದರ್ಭದಲ್ಲಿ ತಕ್ಷಣವೇ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವುದು ಅವಶ್ಯಕವಾಗಿದ್ದು, ಕೋವಿಡ್ ದೃಢಪಟ್ಟಲ್ಲಿ ಅದಕ್ಕೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಲು ಸಾಧ್ಯವಾಗುತ್ತದೆ.
ಆದರೆ, ಆರಂಭದಲ್ಲಿ ಸ್ಥಳೀಯ ವೈದ್ಯರಿಂದ ಔಷಧ, ಚಿಕಿತ್ಸೆ ಪಡೆಯುವುದರಿಂದ ತಾತ್ಕಾಲಿಕವಾಗಿ ಪರಿಹಾರ ಸಿಕ್ಕಿದರೂ, ದಿನಕಳೆದಂತೆ ರೋಗಲಕ್ಷಣಗಳು ಉಲ್ಬಣಗೊಂಡು ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾದಾಗ ಬಹಳ ತಡವಾಗಿರುತ್ತದೆ. ಹಾಗಾಗಿ ರೋಗಿಗಳು ಕೊರೊನಾ ರೋಗ ಲಕ್ಷಣ ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಲ್ಲದೆ, ಸ್ಥಳೀಯ ವೈದ್ಯರು ತಮ್ಮಲ್ಲಿಗೆ ಬರುವ ರೋಗಿಗಳಲ್ಲಿ ಕೊರೊನಾ ಲಕ್ಷಣ ಕಂಡುಬಂದಲ್ಲಿ ಅವರನ್ನು ಕೂಡಲೇ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಸೂಚಿಸಬೇಕು. ಕೊರೊನಾ ಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ನೀಡಿದರೆ ಅಂಥಾ ವೈದ್ಯರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.