ಕಾಪು: ಪುತ್ತಿಗೆ ಮಠ ಹಾಗೂ ಗುರ್ಮೆ ಫೌಂಡೇಶನ್ ವತಿಯಿಂದ ಕೊರೊನಾ ತುರ್ತು ಚಿಕಿತ್ಸೆಗಾಗಿ ನೀಡಿರುವ ನಾಲ್ಕು ಆ್ಯಂಬುಲೆನ್ಸ್ ಗಳ ಹಸ್ತಾಂತರ ಕಾರ್ಯಕ್ರಮ ಕಾಪುವಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ನಡೆಯಿತು.
ಆ್ಯಂಬುಲೆನ್ಸ್ ಗೆ ಚಾಲನೆ ನೀಡಿ ಮಾತನಾಡಿದ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥರು, ಕೊರೊನಾ ಸಮಸ್ಯೆಯಿಂದಾಗಿ ಮನುಕುಲ ತತ್ತರಿಸಿ ಹೋಗಿದೆ. ಆಕಸ್ಮಿಕವೋ ಅಥವಾ ವ್ಯವಸ್ಥಿತ ಪಿತೂರಿಯೋ ಅರಿಯದೇ ಭಾರತ ಕೊರೊನಾದಿಂದ ಮುಕ್ತವಾಗಲು ಹೆಣಗಾಡುತ್ತಿದೆ. ಇಂತಹ ಕಠಿಣ ಸಮಯದಲ್ಲಿ ಉಳ್ಳವರು ಸೇವೆ ನೀಡಬೇಕು. ನಾವೆಲ್ಲರೂ ಒಟ್ಟಾಗಿ ಸೇವೆ ಮಾಡೋಣ ಎಂದು ಕರೆ ನೀಡಿದರು.
ಗುರ್ಮೆ ಫೌಂಡೇಶನ್ ನ ಪ್ರವರ್ತಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ರಕ್ಷಕರಿಗಿಲ್ಲ ರಕ್ಷದ ಫಲವು, ನದಿಯ ನೀರು ನದಿಗಲ್ಲ, ಸಂತನ ಬದುಕು ಸಂತನಿಗಲ್ಲ, ಅದು ಲೋಕದ ಹಿತಕ್ಕೆ ಕಬೀರ ಎಂಬ ಮಾತಿದೆ. ಇದರಂತೆ ನನ್ನ ತಾಯಿಯ ಹೆಸರಿನಲ್ಲಿ ಗುರ್ಮೆ ಫೌಂಡೇಶನ್ ಅನ್ನು ಸ್ಥಾಪಿಸಿ ದೇವರು ಕೊಟ್ಟದರಲ್ಲಿ ಒಂದು ಭಾಗವನ್ನು ಸಮಾಜಕ್ಕಾಗಿ ಮೀಸಲಿಡುತ್ತಾ ಬಂದಿದ್ದೇನೆ.
ಕೊರೊನಾ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಗಳ ಕೊರತೆ ಇದ್ದು, ಪ್ರಧಾನಿ ಮೋದಿಯವರು ಟ್ಯಾಕ್ಸಿಗಳನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಲು ಕರೆ ನೀಡಿದ್ದಾರೆ. ಅವರ ಕರೆಯನ್ನು ಸ್ವೀಕರಿಸಿ ಗುರ್ಮೆ ಫೌಂಡೇಶನ್ ಎರಡು ಆ್ಯಂಬುಲೆನ್ಸ್ ಹಾಗೂ ಪುತ್ತಿಗೆ ಮಠದ ವತಿಯಿಂದ ಎರಡು ಆ್ಯಂಬುಲೆನ್ಸ್ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಶಾಸಕ ಲಾಲಾಜಿ ಮೆಂಡನ್, ಕಾಪು ವೈದ್ಯಾಧಿಕಾರಿ ಸುಬ್ರಾಯ ಕಾಮತ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿ.ಪಂ. ಅಧ್ಯಕ್ಷ ದಿನಕರ್ ಬಾಬು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ, ಕೆ.ಎಂ.ಎಫ್ ನಿರ್ದೇಶಕ ಬೆಂಗಳೂರು ದಿವಾಕರ್ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಮುಖ್ಯಾಧಿಕಾರಿ ವೆಂಕಟೇಶ್ ನಾವಡ, ಪುರಸಭೆ ಸದಸ್ಯ ಅರುಣ್ ಶೆಟ್ಟಿ ಪಾದೂರು, ಉದ್ಯಮಿ ಸಂದೀಪ್ ಶೆಟ್ಟಿ ಕನ್ಯಾನ ಗುತ್ತು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.