ಗೌತಮಿ ಕಾಮತ್ , ಬಿ.ಎ ಪತ್ರಿಕೋದ್ಯಮ ವಿಭಾಗ, ಎಂ.ಪಿ.ಎಂ.ಕಾಲೇಜು ಕಾರ್ಕಳ
ಅದೃಷ್ಟ ಇದ್ದಾಗ ಮುಟ್ಟಿದ್ದೆಲ್ಲ ಚಿನ್ನ ಅಂತಾರೆ. ಆದರೆ ಶ್ರಮಪಡದೇ ಬಿತ್ತಿದ ಬೀಜ ಎಂದೂ ಅನ್ನ ಆಗುವುದಿಲ್ಲ. ನಾವು ಜೀವನದಲ್ಲಿ ಎಷ್ಟೇ ಸಾಧನೆ ಮಾಡಿ ಎತ್ತರಕ್ಕೆ ಬೆಳೆದರೂ ಆ ಅನ್ನವನ್ನು ತಿನ್ನಲು ತಲೆಬಾಗಲೇಬೇಕು. ಅದೇ ರೀತಿ ಜೀವನದ ಪಯಣದಲ್ಲಿ ಅನೇಕ ದಾರಿಗಳು ಸುಂದರವಾಗಿಯೇ ಕಾಣಬಹುದು, ಆದರೆ ನಾವು ನಮ್ಮ ಗುರಿಯ ಬಗ್ಗೆ ಯೋಚಿಸಬೇಕು. ಆ ಗುರಿ ಸುಂದರವಾಗಿದ್ದರೆ ಗುರಿ ಸಾಧಿಸುವ ಆ ದಾರಿಯನ್ನೂ ಸುಂದರಗೊಳಿಸೋದು ಹೇಗೆ ಅಂತ ಯೋಚಿಸಬೇಕು. ಹಾಗೆಯೇ ನಮ್ಮನ್ನು ನಾವು ಮೊದಲು ನಂಬಬೇಕು. ಬೇರೆಯವರನ್ನಲ್ಲ. ನಾವು ನಮ್ಮ ಜೀವನದಲ್ಲಿ ಯಾರ ಎದುರು ಸೋತರೂ ಪರವಾಗಿಲ್ಲ ನಮ್ಮ ಮುಂದೆ ನಾವೆಂದು ಸೋಲನ್ನು ಒಪ್ಪಿಕೊಳ್ಳಬಾರದು.
ಪ್ರತಿ ನಿತ್ಯವೂ ಹೊಸ ಹೊಸ ಆಲೋಚನೆಗಳು ಹೊಸ ಹೊಸ ಗುರಿಯ ಬಗ್ಗೆ ಯೋಚಿಸಿದರೆ, ಸಾಧನೆಯತ್ತ ಒಂದಲ್ಲ ಒಂದಿನ ತಲುಪುತ್ತೇವೆ. ಸಾಧನೆಗೈಯುವ ಛಲದಲ್ಲಿ ಸೋಲುಗಳು ಎದುರಾದರೆ ಊಟದಲ್ಲಿ ಕಲ್ಲುಗಳು ಸಿಕ್ಕ ಹಾಗೇಯೇ. ಆದ್ದರಿಂದ ನಾವು ಊಟದಲ್ಲಿನ ಕಲ್ಲುಗಳನ್ನು ಎಸೆಯಬೇಕೇ ಹೊರತು ಊಟವನ್ನೇ ಎಸೆಯಬಾರದು.
ಸೋಲೇ ಇಲ್ಲಿ ಪಾಠವಾಗುತ್ತದೆ:
ನಮ್ಮ ಜೀವನದಲ್ಲಿ ಸೋಲುಗಳು ತಪ್ಪುಗಳು ನಮ್ಮ ಅನುಭವಗಳನ್ನು ಪ್ರತಿನಿತ್ಯ ಕೂಡ ಒಂದೊಂದು ರೀತಿಯ ಪಾಠ ಕಲಿಸುತ್ತಾ ಇರುತ್ತವೆ. ಅದೇ ಅನುಭವಗಳು ಅದೆಷ್ಟು ತಪ್ಪುಗಳನ್ನು ಕಡಿಮೆ ಮಾಡುತ್ತವೆ. ಇದಕ್ಕೆ ಉದಾಹರಣೆಯಾಗಿ ಬದುಕು ಒಂದು ಕುಸ್ತಿ ಆಟವಿದ್ದಂತೆ ನಾವು ಬಿದ್ದೊಡನೆ ಸೋವೆವು ಎಂದು ಅಲ್ಲೇ ಬಿದ್ದು ಬಿಟ್ಟರೆ ಏಳಲು ಸಾಧ್ಯವಿಲ್ಲ.ಎದ್ದರೆ ಮಾತ್ರ ಮತ್ತೆ ಒಂದಿನ ಗೆಲ್ಲುತ್ತೇವೆ.
ಪ್ರತಿಯೊಬ್ಬರ ಜೀವನದಲ್ಲಿ ಸೋಲು ಶಾಶ್ವತವಲ್ಲ. ಹಾಗೆಯೇ ನಮಗೆ ಸಿಕ್ಕ ಪ್ರತಿಯೊಂದು ಅವಕಾಶಗಳನ್ನು ಬಾಚಿ ತಬ್ಬಿಕೊಳ್ಳಬೇಕು. ಏನಾದರೂ ಸಾಧಿಸುವ ಛಲವಿದ್ದರೆ ಇಂದೇ ಈ ಕ್ಷಣ, ಈ ಗಳಿಗೆಯಲೇ ಸಾಧನೆ ಮಾಡಿ ಪೂರ್ತಿಗೊಳಿಸಬೇಕು. ಯಾರಿಗ್ಗೊತ್ತು ಇಂದು ನಮಗೆ ನಮಗೆ ಸಿಕ್ಕ ಅವಕಾಶ ನಾಳೆ ಬೇರೆಯವರ ಪಾಲಾಗಬಹುದು. ಜೀವನದಲ್ಲಿ ಸುಖ ದುಃಖ ಸಿಹಿ-ಕಹಿ ಎಲ್ಲವನ್ನು ಅನುಭವಿಸಬೇಕು, ಯಾವುದೇ ಕಹಿ ಔಷಧವನ್ನು ಹಿಂದೂ-ಮುಂದೂ ಯೋಚಿಸದೆ ಒಂದೇ ಗುಟುಕಿನಲ್ಲಿ ವೇಗವಾಗಿ ಕುಡಿಯುವ ನಾವು, ಅದೇ ಒಂದು ಚಾಕಲೇಟನ್ನು ಆನಂದದಿಂದ ನಿಧಾನವಾಗಿ ಜಗಿದು ಜಗಿದು ತಿನ್ನುತ್ತೇವೆ. ಹೀಗೆಯೇ ನಮ್ಮ ಜೀವನದ ಕಹಿ ಘಟನೆಗಳನ್ನು ವೇಗವಾಗಿ ನುಂಗಿ, ಸಿಹಿ ಘಟನೆಗಳನ್ನು ಮೆಲ್ಲಮೆಲ್ಲನೆ ಆನಂದಿಸಿ ಅನುಭವಿಸೋಣ.
ಈ ಜೀವನವು ಒಂದು ರೀತಿಯ ಐಸ್ ಕ್ರೀಮ್ ಇದ್ದಹಾಗೆ ತಿಂದರೂ ಕರಗುವುದು, ತಿನ್ನದಿದ್ದರೂ ಕರಗುತ್ತದೆ. ಹಾಗೆಯೇ ನಮ್ಮ ಜೀವನವು ಕೂಡ ಹಾಗೆ ಖುಷಿಯಿಂದ ಇದ್ದರೂ ಕೂಡ ಜೀವನ ಸಾಗುತ್ತವೆ. ಇಲ್ಲದಿದ್ದರೂ ಕೂಡ ಜೀವನ ಸಾಗುತ್ತವೆ. ಪ್ರತಿಯೊಬ್ಬರಿಗೂ ಕೂಡ ಕತ್ತಲೆಯ ದಾರಿಯಲ್ಲಿ ಒಂದೊಂದು ಬೆಳಕಿನ ಕಿಟಕಿ ಇದ್ದೇ ಇರುತ್ತದೆ. ಅದೇ ರೀತಿ ನಮ್ಮ ಕಷ್ಟದ ಬದುಕಿನಲ್ಲಿ ಸುಖದ ದಾರಿ ಒಂದಲ್ಲ ಒಂದು ದಿನ ಬಂದೇ ಬರುತ್ತದೆ ಅದಕ್ಕಾಗಿ ಕಾಯುವ ತಾಳ್ಮೆ ನಮ್ಮಲ್ಲಿರಬೇಕು ಅಷ್ಟೇ.
ಪುಸ್ತಕ ಜೀವನವಿದ್ದಂತೆ, ಪೆನ್ನುಗಳು ನಮ್ಮ ಬಳಿಯೇ ಇರುತ್ತವೆ ಆ ಪುಸ್ತಕದಲ್ಲಿ ಏನನ್ನು ಬರೆದುಕೊಳ್ಳಬೇಕು ಇದರಿಂದ ಹೇಗೆ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎನ್ನುವುದು ನಮಗೆ ಬಿಟ್ಟ ವಿಚಾರ. ಅವರವರ ಜೀವನಕ್ಕೆ ಅವರವರೇ ಜವಾಬ್ದಾರರಾಗಿರುತ್ತಾರೆ ಹೊರತು ಇನ್ಯಾರೂ ಅವರ ಜೀವನವನ್ನು ಕೆಡವಲು ಹಾಗೂ ಉದ್ದಾರ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕಷ್ಟ ಬಂದಾಗ ಮಾತ್ರ ಸುಖ ಸಿಗಲು ಸಾಧ್ಯವಾಗುತ್ತದೆ. ಇರುವ ಒಂದು ಜೀವನದಲ್ಲಿ ಯಾರ ಬಗ್ಗೆಯೂ ಯೋಚಿಸುವ ಅಗತ್ಯವಿಲ್ಲ ಜನರು ಸಾವಿರ ಮಾತನಾಡುತ್ತಾರೆ ಎಲುಬಿಲ್ಲದ ನಾಲಿಗೆ ಎಂಬ ಮಾತಿನಂತೆ ಕಷ್ಟ ಬಂದರೆ ಕಷ್ಟವನ್ನು ಪರಿಹರಿಸಲು ಸಮಯ ಕಾಯುತ್ತಿರುತ್ತದೆ. ಹಾಗೆಯೇ ಕಷ್ಟ ಕೊಟ್ಟವರನ್ನು ಶಿಕ್ಷಿಸಲು ಸಮಯ ಅಷ್ಟೇ ಕಾತುರದಿಂದ ಕಾಯುತ್ತಿರುತ್ತದೆ.
ಸುಂದರ ಜೀವನವನ್ನು ಪರಸ್ಪರ ಸ್ನೇಹ ಪ್ರೀತಿ ,ವಿಶ್ವಾಸದಿಂದ ಅನುಭವಿಸುತ್ತ ಸಂತೋಷದಿಂದ ಬದುಕೋಣ. ಯಾರನ್ನಾದರೂ ಸೋಲಿಸುವ ಪ್ರಯತ್ನ ಮಾಡುವ ಬದಲಾಗಿ ಎಲ್ಲರ ಮನಸ್ಸನ್ನು ಖುಷಿಯಿಂದ ಗೆಲ್ಲಲು ಪ್ರಯತ್ನಿಸೋಣ.