ಉಡುಪಿ: ಕೋವಿಡ್ ಎರಡನೇ ಅಲೆ ತೀವ್ರಗೊಂಡಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಯದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ರಘುಪತಿ ಭಟ್ ಅವರು ಲಸಿಕಾ ಕೇಂದ್ರದತ್ತ ದೌಡಾಯಿಸಿ ಜನರ ಸಮಸ್ಯೆಯನ್ನು ಆಲಿಸಬೇಕು ಎಂದು ನಗರಸಭಾ ವಿರೋಧ ಪಕ್ಷದ ನಾಯಕರಾದ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಆಸ್ಪತ್ರೆಗಳು ಈಗಾಗಲೇ ಕೋವಿಡ್ ರೋಗಿಗಳಿಂದ ಭರ್ತಿಯಾಗಿದೆ. ತೀವ್ರ ಅಸ್ವಸ್ಥ ಗೊಂಡವರಿಗೆ ವೆಂಟಿಲೇಟರ್ ಐಸಿಯು ದೊರೆಯುತ್ತಿಲ್ಲ. ನಿಮ್ಮ ಆಡಳಿತದಲ್ಲಿ ಜನರ ಪ್ರಾಣದ ಗತಿ ದೇವರೇ ಗತಿ ಎಂಬಂತೆ ಆಗಿದೆ. ಹೀಗಾಗಿ ಈ ಸಂದರ್ಭದಲ್ಲಿ ನಿಮ್ಮ ಮೇಲೆ ಬಹಳಷ್ಟು ನಂಬಿಕೆ ಇಟ್ಟು ಗೆಲ್ಲಿಸಿದ ಜನರ ಸಂಕಷ್ಟಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಜನರು ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಬಹಳಷ್ಟು ಭಯಭೀತರಾಗಿದ್ದು, ಕೊರೊನಾ ಲಸಿಕೆ ಪಡೆಯಲು ಹಾತೊರೆಯುತ್ತಿದ್ದಾರೆ. ಆದರೆ ಲಸಿಕಾ ಕೇಂದ್ರದಲ್ಲಿ ಸರಿಯಾಗಿ ಲಸಿಕೆ ದೊರೆಯುತ್ತಿಲ್ಲ. 45 ವರ್ಷ ಮೇಲ್ಪಟ್ಟವರು ಮೊದಲ ಡೋಸ್ ಪಡೆದಿದ್ದು, ಅವರಿಗೆ ಎರಡನೇ ಡೋಸ್ ಪಡೆಯಲು ಸಾಧ್ಯವಾಗುತಿಲ್ಲ. ಇದರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರಾಗಿದ್ದು ಹಲವು ಬಾರಿ ಲಸಿಕಾ ಕೇಂದ್ರಕ್ಕೆ ಬಂದು ಕಾದು ಕಾದು ಸುಸ್ತಾಗಿ ಹಿಂತಿರುಗಿದ್ದಾರೆ ಎಂದು ಹೇಳಿದ್ದಾರೆ.
ಮೊದಲು ಡೋಸ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಸಿಗುತ್ತಿಲ್ಲ. ಈಗ ಕೇವಲ ಕೋವಿಶೀಲ್ಡ್ ದೊರೆಯುತ್ತಿದೆ. ಬಹಳಷ್ಟು ಜನರ ಲಸಿಕೆ ಪಡೆಯುವ ಅವಧಿಯು ಮುಗಿಯುತ್ತಿದೆ. ಲಸಿಕೆ ಪಡೆಯಲು ಸಂಪೂರ್ಣ ಆನ್ಲೈನ್ ವ್ಯವಸ್ಥೆ ಇದ್ದು, ಇದು ಬಹಳಷ್ಟು ಜನರನ್ನು ಗೊಂದಲಕ್ಕೀಡು ಮಾಡಿದೆ. 18ರಿಂದ 44 ವರ್ಷದವರಿಗೂ ಲಸಿಕೆ ನೀಡುವ ಅಭಿಯಾನ ಆರಂಭವಾಗಿದ್ದು, ಆನ್ಲೈನ್ ನೋಂದಣಿಯಲ್ಲಿ ಬಹಳಷ್ಟು ಗೊಂದಲ ಇದೆ.
ಲಸಿಕಾ ಕೇಂದ್ರದಲ್ಲಿ ಸಾಮಾನ್ಯ ಜನರು ಕ್ಯೂ ನಲ್ಲಿ ನಿಂತು ಟೋಕನ್ ತೆಗೆದುಕೊಂಡು ಕಾಯುತ್ತಿದ್ದಾರೆ. ಪ್ರಭಾವಿ ವ್ಯಕ್ತಿಗಳು ಯಾವುದೇ ಟೋಕನ್ ಇಲ್ಲದೆ ರಾಜಕೀಯ ಪ್ರಭಾವ ಬಳಸಿ ಲಸಿಕೆ ಪಡೆಯುತ್ತಿದ್ದಾರೆ ಎಂದು ದೂರಿದ್ದಾರೆ.
ಲಸಿಕೆ ನೀಡುವ ವ್ಯವಸ್ಥೆ ಬಹಳಷ್ಟು ಗೊಂದಲ ಮಯವಾಗಿದ್ದು, ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ನಿಮಗೆ ಬಹಳಷ್ಟು ಜವಾಬ್ದಾರಿ ಇದೆ. ತಾವು ತಕ್ಷಣ ತಮ್ಮ ಜವಾಬ್ದಾರಿಯನ್ನು ಅರಿತು ಲಸಿಕಾ ಕೇಂದ್ರದತ್ತ ದೌಡಾಯಿಸಿ ಜನರ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಕಾರ್ಯಪ್ರವೃತ್ತರಾಗಬೇಕು ಎಂದು ರಮೇಶ್ ಕಾಂಚನ್ ಒತ್ತಾಯಿಸಿದ್ದಾರೆ.