ಅತಿಯಾದ ದೇಹದ ತೂಕ ಹೊಂದುವುದು ಅನೇಕ ಖಾಯಿಲೆಗಳಿಗೆ ಆಹ್ವಾನ ನೀಡಿದಂತೆ. ಮಿತಿಯಾದ ದೇಹ ತೂಕ ಹೊಂದುವುದರಿಂದ ಆಯಸ್ಸು ಹೆಚ್ಚಾಗುತ್ತದೆ. ಈಗಿನ ಆಹಾರ ಕ್ರಮ, ಜೀವನ ಶೈಲಿ, ಅತಿಯಾದ ಒತ್ತಡ ದೇಹದ ತೂಕ ಹೆಚ್ಚಲು ಕಾರಣವಾಗಿದೆ. ಕೆಲವರು ಅತಿಯಾಗಿ ತಿಂದರೆ, ಇನ್ನು ಕೆಲವರು ಸಮಯಕ್ಕೆ ಸರಿಯಾಗಿ ತಿನ್ನದೇ ಇರುವುದರಿಂದಲೂ ತೂಕ ಹೆಚ್ಚಾಗುತ್ತದೆ. ಆಹಾರ ಸೇವಿಸದೇ ಇರುವುದರಿಂದ ತೂಕ ಕಡಿಮೆಯಾಗುತ್ತದೆ ಎಂಬುದು ತಪ್ಪು ಅಭಿಪ್ರಾಯ.
ಸಮಯಕ್ಕೆ ಸರಿಯಾಗಿ ಆರೋಗ್ಯಯುತ ಆಹಾರವನ್ನು ಸೇವಿಸುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ಸಿಂಥಿಯಾ ಮೆಲ್ವಿನ್ ಅವರ “ನಮ್ಮ ಆರೋಗ್ಯ ನಮ್ಮ ಕೈಯಲ್ಲಿ” ಅಂಕಣ ಓದಿ. ಒಂದಷ್ಟು ಟಿಪ್ಸ್ ಪಡೀರಿ
ಹೆಚ್ಚು ದಪ್ಪ ಇರುವವರು ಕಡಿಮೆ ಕೊಬ್ಬಿನಾಂಶ ಇರುವ ಮೀನು-ಮಾಂಸ, ಊಟದಲ್ಲಿ ಯಥೇಚ್ಛವಾಗಿ ತರಕಾರಿ ಮತ್ತು ಹಣ್ಣಿನ ಸಲಾಡ್ ಗಳನ್ನು ಸೇವಿಸುವುದು ಉತ್ತಮ. ಜಂಕ್ ಫುಡ್, ಕರಿದ ಆಹಾರ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು. ಇಂದಿನ ಬ್ಯುಸಿ ಲೈಫ್ ನಲ್ಲಿ ವ್ಯಾಯಾಮ ಮಾಡಲೂ ಸಮಯವೇ ಇಲ್ಲದಂತ ಪರಿಸ್ಥಿತಿ ಎದುರಾಗಿದೆ. ಕಡಿಮೆ ಸಮಯದಲ್ಲಿ ಯಾವುದೇ ಅಡ್ಡ ಪರಿಣಾಮ ಇಲ್ಲದೆ ಮನೆಯಲ್ಲೇ ತೂಕ ಹೇಗೆ ಇಳಿಸಬಹುದು ಎನ್ನುವುದನ್ನು ತಿಳಿಯೋಣ:
ಅರಿಶಿನದ ಟೀ:
2ಲೋಟ ನೀರಿಗೆ 1″ ಚಕ್ಕೆ, 1″ ತುರಿದ ಅಥವಾ ಜಜ್ಜಿದ ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಿ ಇದಕ್ಕೆ ಕಾಳುಮೆಣಸಿನ ಹುಡಿ ಮತ್ತು ಅರಿಶಿನ ಹುಡಿ ಹಾಕಿ ಗ್ಯಾಸ್ ಅನ್ನು ಆಫ್ ಮಾಡಿ. ಕುಡಿಯುವಾಗ ನಿಂಬೆರಸವನ್ನು ಹಿಂಡಿ ಕುಡಿಯಿರಿ. ಈ ಅರಿಶಿನ ಟೀಯನ್ನು 15 ದಿನ ಬೆಳಿಗ್ಗೆ ಬರಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಊಟ ಮಾಡಿದ 1ಗಂಟೆ ನಂತರ ಮಲಗುವ ಮುನ್ನ ಕುಡಿಯುವುದರಿಂದ ಸೊಂಟ ಮತ್ತು ಹೊಟ್ಟೆಯ ಬೊಜ್ಜು ಕರಗಿ ದೇಹದ ತೂಕ ಬೇಗನೆ ಇಳಿಕೆಯಾಗುವುದರಲ್ಲಿ ಸಂಶಯನೇ ಇಲ್ಲ. ಅರಿಶಿನ ಸೇವಿಸುವುದರಿಂದ ದೇಹದ ರೋಗ-ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರ್ಕ್ಯುಮಿನ್ ಇರುವುದರಿಂದ ಮಧುಮೇಹ ರೋಗಿಗಳಿಗೆ ತುಂಬಾ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನುಕಡಿಮೆ ಮಾಡುತ್ತದೆ.
ಜೀರಿಗೆ ಕಷಾಯ:
2 ಲೋಟ ನೀರಿಗೆ 1″ಶುಂಠಿಯನ್ನು ಕಟ್ ಮಾಡಿ ಹಾಕಿ ಇದಕ್ಕೆ 1ಸ್ಪೂನ್ ಜೀರಿಗೆ ಹಾಕಿ ಚೆನ್ನಾಗಿ ಬಣ್ಣ ಬದಲಾಗುವವರೆಗೂ ಕುದಿಸಿ, ಸೋಸಿ ದಿನಾ ಬೆಳಿಗ್ಗೆ ಕುಡಿಯಿರಿ.
ಕರಿಬೇವು ಕಷಾಯ:
2ಲೋಟ ನೀರಿಗೆ 5-6 ಎಸಳು ಕರಿಬೇವು ಸೊಪ್ಪು ಮತ್ತು 1 ಸ್ಪೂನ್ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ ಸೋಸಿ ಕುಡಿಯಿರಿ. ಕರಿಬೇವು ಸೊಪ್ಪಿನ ಚಟ್ನಿ ಮಾಡಿ ಊಟದಲ್ಲಿ ಬಳಸುತ್ತಾ ಬಂದರೆ ದೇಹದ ತೂಕ ಕಡಿಮೆಯಾಗುತ್ತದೆ. ಅದೇ ರೀತಿ ಒಗ್ಗರಣೆಗೆ ಬಳಸಿದ ಕರಿಬೇವು ಸೊಪ್ಪನ್ನು ಬದಿಗಿಡದೆ ತಿನ್ನುವುದರಿಂದ ತುಂಬಾ ಒಳ್ಳೆಯದು.
ಬೂದುಕುಂಬಳಕಾಯಿ ಜ್ಯೂಸ್:
ಸಿಪ್ಪೆ ಮತ್ತು ಬೀಜ ತೆಗೆದ ಕುಂಬಳಕಾಯಿ ಸಣ್ಣಗೆ ಕಟ್ ಮಾಡಿ ಇದಕ್ಕೆ ಸ್ವಲ್ಪ ಬೆಲ್ಲ ಮತ್ತು ಕಾಳುಮೆಣಸಿನ ಹುಡಿ ಸೇರಿಸಿ ಜ್ಯೂಸ್ ತಯಾರಿಸಿ ಕುಡಿಯುವುದರಿಂದಲೂ ದೇಹದ ತೂಕ ಕಡಿಮೆಯಾಗುವುದಲ್ಲದೆ ದೇಹಕ್ಕೂ ತಂಪು ನೀಡುತ್ತದೆ.
ಹೆಚ್ಚು ಖರ್ಚಿಲ್ಲದೆ ಮನೆಯಲ್ಲೇ ಸರಳವಾಗಿ ಈ ರೀತಿಯ ಆರೋಗ್ಯಕರ ಕಷಾಯ ಮತ್ತು ತರಕಾರಿ ಜ್ಯೂಸ್ ಅನ್ನು ಮಾಡಿ ಕುಡಿಯುವುದರಿಂದ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸುವುದರಿಂದ ದೇಹದ ಬೊಜ್ಜು ಕರಗಿ ಸುಂದರ ಮೈಕಟ್ಟು ನಮ್ಮದಾಗುವುದು.