ಉಡುಪಿ ಜಿಲ್ಲೆ:ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗೆ ಅವಕಾಶ

ಉಡುಪಿ : ರಾಜ್ಯಾದ್ಯಂತ ಕೋವಿಡ್-19 ಸೊಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸೊಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಪರಾಮರ್ಶಿಸಿ ಮೇ 10 ರಿಂದ 24 ರ ವರೆಗೆ ಕೊರೋನಾ ಕರ್ಫ್ಯೂ ವಿಧಿಸಿಲಾಗಿರುತ್ತದೆ.

ಸರ್ಕಾರದ ಮುಖ್ಯಕಾರ್ಯದರ್ಶಿಯವರ ಮಾರ್ಗಸೂಚಿಯಂತೆ ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕ ಪಡಿತರ ವ್ಯವಸ್ಥೆ ಮಾಡಲು ನ್ಯಾಯಬೆಲೆ ಅಂಗಡಿಗಳಿಗೆ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ತಮ್ಮ ವ್ಯಾಪ್ತಿಗೆ ಒಳಪಡುವ ನ್ಯಾಯಬೆಲೆ ಅಂಗಡಿಗಳು ಈ ಕೆಳಕಂಡ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಸಿ ಪಡಿತರ ವಿತರಣೆ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ.

ಪಡಿತರ ವ್ಯವಸ್ಥೆಗೆ ಪ್ರತಿ ತಿಂಗಳು ನಿರ್ವಹಿಸಿದ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಬೇಕು.  ನ್ಯಾಯಬೆಲೆ ಅಂಗಡಿಗಳಿಗೆ ಪಡಿತರದಾರರು ಒಮ್ಮೆಲೇ ಬರದೆ ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಅವಶ್ಯಕತೆಗೆ ತಕ್ಕಂತೆ ವಾರ್ಡ್ ವಾರು ಪಡಿತರದಾರರಿಗೆ ಮೊದಲೇ ತಿಳಿಸಿ ಪಡಿತರ ವ್ಯವಸ್ಥೆಯನ್ನು ಈ ವಾರದಿಂದಲೇ ಪ್ರಾರಂಭಿಸಬೇಕು. ತಿಂಗಳ ಕೊನೆಯ ವಾರದಲ್ಲಿ ವಿತರಿಸಿದಲ್ಲಿ ಸಮಸ್ಯೆ ಎದುರಾಗಬಹುದಾಗಿದ್ದು ಅದಕ್ಕೆ ಅವಕಾಶ ನೀಡದಿರುವುವಂತೆ ತಿಳಿಸಲಾಗಿದೆ.

ನ್ಯಾಯಬೆಲೆ ಅಂಗಡಿಯ ಮುಂಭಾಗದಲ್ಲಿ ಸಾಮಾಜಿಕ ಅಂತರ ಕಾಪಾಡಲು ಆರು ಅಡಿಗೊಂದು ಚೌಕವನ್ನು ಕಡ್ಡಾಯವಾಗಿ ಮಾಡಿ ಅದರಂತೆ ಪಡಿತರದಾರರನ್ನು ಸಾಲಿನಲ್ಲಿ ನಿಲ್ಲಿಸಿ ಪಡಿತರ ವ್ಯವಸ್ಥೆ ಕಲ್ಪಿಸಬೇಕು.

ಕೋವಿಡ್-19 ರ ಮಾರ್ಗಸೂಚಿಯಂತೆ ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ಸಾರ್ವಜನಿಕ ಅಂತರ ಕಾಪಾಡುವುದು, ಮಾಸ್ಕನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಸುವ ವ್ಯವಸ್ಥೆ ಕಲ್ಪಿಸಬೇಕು.

ಪ್ರಸ್ತುತ ಮಾಹೆಯಲ್ಲಿ ಪ್ರತಿ ತಿಂಗಳು ನೀಡಲಾಗುತ್ತಿರುವ ಆಹಾರಧಾನ್ಯದೊಂದಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆಯಲ್ಲಿ ಹೆಚ್ಚುವರಿಯಾಗಿ ಪ್ರತಿ ಪಡಿತರದಾರರಿಗೆ 5 ಕೆ.ಜಿ ಅಕ್ಕಿ ನೀಡುವುದರಿಂದ ಯಾವುದೇ ಕಾರಣಕ್ಕೂ ಹಂಚಿಕೆಯಲ್ಲಿ ವ್ಯಪಗತವಾಗದಂತೆ ರಜಾ ದಿನಗಳಲ್ಲಿಯೂ ಸಹ ಪಡಿತರ ವ್ಯವಸ್ಥೆಯನ್ನು ಕಲ್ಪಿಸಬೇಕು ಹಾಗೂ ಈ ಬಗ್ಗೆ ತಮ್ಮ ವ್ಯಾಪ್ತಿಯ ಎಲ್ಲಾ ಪಡಿತರದಾರರಿಗೆ ತಿಳುವಳಿಕೆ ನೀಡಿ, ಭಿತ್ತಿ ಪತ್ರವನ್ನು ಮುದ್ರಿಸಿ ಎಲ್ಲಾ ಪಡಿತರದಾರರಿಗೆ ತಿಳುವಳಿಕೆ ನೀಡುವ ಕುರಿತು ಕ್ರಮಕೈಗೊಳ್ಳಬೇಕು. ಹಂಚಿಕೆಯಾಗುವ ಆಹಾರಧಾನ್ಯದ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಯ ನಾಮಫಲಕದಲ್ಲಿ ಫ್ಲೆಕ್ಸ್ ಮಾಡಿ ಸಾರ್ವಜನಿಕರಿಗೆ, ಪಡಿತರದಾರರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಲು ಕ್ರಮಕೈಗೊಳ್ಳಬೇಕು. ಆಹಾರಧಾನ್ಯವನ್ನು ಈಗಿನ ವ್ಯವಸ್ಥೆಯಂತೆ ಬಯೋಮೆಟ್ರಿಕ್/ಆಧಾರ್ ಆಧಾರಿತ ಒ.ಟಿ.ಪಿ ಮೂಲಕ ಪಡಿತರ ವಿತರಿಸಬೇಕು.

ಈಗಾಗಲೇ ಕೊರೋನಾ ಕರ್ಫ್ಯೂ ಇರುವುದರಿಂದ ಮತ್ತು ಒಂದು ದೇಶ ಒಂದು ಪಡಿತರ ವ್ಯವಸ್ಥೆ ಜಾರಿಯಾಗಿರುವುದರಿಂದ ವಲಸೆಗಾರರಿಗೆ ತೊಂದರೆ ಆಗದಂತೆ ಅಂತರರಾಜ್ಯ/ಅAತರಜಿಲ್ಲೆ ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಯಾವುದೇ ವರ್ಗದ ಪಡಿತರ ಚೀಟಿಗಳಿಗೆ ಪಡಿತರ ಪಡೆಯಲು ಅವಕಾಶ ಕಲ್ಪಿಸಿರುವುದರಿಂದ ಅಂತಹ ಪ್ರಕರಣದಲ್ಲಿ ನಿಯಮಾನುಸಾರ ಆಹಾರಧಾನ್ಯವನ್ನು ವಿತರಿಸಬೇಕು. ಹೆಚ್ಚುವರಿ ಹಂಚಿಕೆ ಅವಶ್ಯಕವಿದ್ದಲ್ಲಿ ಕೂಡಲೇ ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ