ಉಡುಪಿ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ವೈಚಾರಿಕ ಸಾಹಿತಿ ಉಡುಪಿಯ ಡಾ. ಜಿ. ಭಾಸ್ಕರ್ ಮಯ್ಯ (70) ಅವರು ಕೋವಿಡ್ ನಿಂದ ಇಂದು ನಿಧನ ಹೊಂದಿದರು.
ಕಳೆದ 4 ದಿನಗಳಿಂದ ಅವರು ಉಡುಪಿ ಜಿಲ್ಲೆಯ ಸಾಲಿಗ್ರಾಮದ ಪ್ರಣವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ 4.30ರ ಸುಮಾರಿಗೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕರ್ನಾಟಕ ವೈಚಾರಿಕ ಸಾಹಿತ್ಯದ ಮೇರುಕೊಂಡಿಯೊಂದು ಇಂದು ಕಳಚಿಕೊಂಡಂತಾಗಿದೆ.
ಹಿಂದಿ ಸಾಹಿತ್ಯ ಅಧ್ಯಯನದಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದ ಡಾ.ಜಿ.ಭಾಸ್ಕರ್ ಮಯ್ಯ ಅವರ ವೈಚಾರಿಕ ಕೃತಿಗೆ ಕೇಂದ್ರ ಸರ್ಕಾರ 2004ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು.
ಇವರು ದೀರ್ಘಕಾಲ ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಹಿಂದಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿದ್ದರು. ವೈಚಾರಿಕ ಹಾಗೂ ಪ್ರಗತಿಪರ ಸಾಹಿತ್ಯದಲ್ಲಿ 50ಕ್ಕೂ ಹೆಚ್ಚು ಗ್ರಂಥ ರಚಿಸಿದ್ದ ಭಾಸ್ಕರ್ ಮಯ್ಯ ಅವರ ನಿಧನಕ್ಕೆ ಸಾಹಿತ್ಯ ಲೋಕ ಕಂಬನಿ ಮಿಡಿದಿದೆ.