ಅದು ಮನೆಯ ಕಾರ್ಯಕ್ರಮ, ಅದ್ಕೆ ಮಾಸ್ಕ್ ಹಾಕಿಲ್ಲ: ಡಿಸಿ ಜಗದೀಶ್

ಉಡುಪಿ: ಉಡುಪಿ ಜಿಲ್ಲಾ ಎಎಸ್ಪಿಯ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಮಾಸ್ಕ್ ಧರಿಸದೆ ಭಾಗವಹಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಇದೀಗ ಈ ಘಟನೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದು, ಇದು ನನ್ನ ಮನೆಯ ಪಕ್ಕದಲ್ಲಿರುವ ಹೆಚ್ಚುವರಿ ಎಸ್ಪಿ ಮನೆಯಲ್ಲಿ ನಡೆದ ಅವರ ಮಗಳ ಮೆಹಂದಿ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ಕೇವಲ ನಾಲ್ಕು ಕುಟುಂಬಗಳಿಗೆ ಸೀಮಿತಗೊಳಿಸಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಅವರ ಕ್ಲೋಸ್ ಫ್ಯಾಮಿಲಿಯ ಕೆಲವೇ ಕೆಲವು ಮಂದಿ ಸೇರಿದ್ದರು. ಅದು ಸಾರ್ವಜನಿಕ ಸ್ಥಳ ಅಲ್ಲ. ಆದ್ದರಿಂದ ಅಲ್ಲಿ ಮಾಸ್ಕ್ ಧರಿಸಬೇಕೆಂಬುದು ಕಡ್ಡಾಯ ಅಲ್ಲ, ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಹೇಳಿದ್ದಾರೆ.

ನಾನು ಐದಾರು ನಿಮಿಷಗಳ ಕಾಲ ಮಾತ್ರ ಅವರ ಮನೆಯಲ್ಲಿದ್ದೆ. ಮಧುಮಗಳ ಕೋರಿಕೆ ಮೇರೆಗೆ ಆಕೆಯೊಂದಿಗೆ ಫೋಟೋಗಾಗಿ ಒಂದು ನಿಮಿಷ ಮಾತ್ರವೇ ಮಾಸ್ಕ್ ತೆಗೆದಿದ್ದೇನೆ. ರಾತ್ರಿ 8.50ಕ್ಕೆ ಕರ್ಫ್ಯೂಗಿಂತ ಮೊದಲೇ ಮನೆ ಸೇರಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.