ಕಾರ್ಕಳ: ಇಲ್ಲಿನ ಕುಂಟಲ್ಪಾಡಿ ನಿವಾಸಿ ಸುನೀಲ್ ಕೊಟ್ಯಾನ್ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ದನವನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಡೆದಿದೆ.
ಸುನೀಲ್ ಕೃಷಿಕರಾಗಿದ್ದು, ಕೃಷಿಯ ಜತೆಗೆ ಹೈನುಗಾರಿಕೆಯನ್ನು ನಡೆಸುತ್ತಿದ್ದರು. 6 ದನಗಳನ್ನು ಖರೀದಿಸಿ ಸಾಕಿಕೊಂಡಿದ್ದರು. ಎಂದಿನಂತೆ ಎ.12ರಂದು ರಾತ್ರಿ ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಆದರೆ, ಮರುದಿನ ಬೆಳಿಗ್ಗೆ ಹಾಲು ಕರೆಯಲು ಬಂದಾಗ ಐದು ದನಗಳು ಮಾತ್ರ ಇದ್ದು, ಒಂದು ದನ ಕಳವಾಗಿರುವುದು ಗೊತ್ತಾಗಿದೆ.
ಘಟನೆ ನಡೆದ ನಾಲ್ಕೈದು ದಿನಗಳ ಬಳಿಕ ಅಂದರೆ ಎ.16ರಂದು ಮೂವರು ವ್ಯಕ್ತಿಗಳು ಕಾಬೆಟ್ಟುವಿನ ಬಾರ್ ಬಳಿ ಕಪ್ಪು ಬಣ್ಣದ ದನವನ್ನು ಸಹಿತ ಇತರೆ ಎರಡು ದನಗಳನ್ನು ಹಿಂಸಾತ್ಮಕವಾಗಿ ಕಾರಿನಲ್ಲಿ ತುಂಬಿಸಿಕೊಂಡು ಹೋಗುವ ದೃಶ್ಯ ಸುನೀಲ್ ಮೊಬೈಲ್ ಬಂದಿತ್ತು. ಅದರಲ್ಲಿ ಒಂದು ದನ ಸುನೀಲ್ ಅವರದಾಗಿದ್ದು, ಅದರ ಮೌಲ್ಯ ₹20 ಸಾವಿರವಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.