ಮದುವೆ, ಸಭೆ, ಸಮಾರಂಭಗಳಲ್ಲಿ ನೂರಕ್ಕಿಂತ ಅಧಿಕ ಜನ ಸೇರುವಂತಿಲ್ಲ: ಸಚಿವ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೇಗವಾಗಿ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮದುವೆ, ಸಭೆ ಹಾಗೂ ಸಮಾರಂಭಗಳಿಗೆ ಸರ್ಕಾರ ನಿಯಂತ್ರಣ ಹೇರಲು ಮುಂದಾಗಿದೆ.

ರಾಜ್ಯದಲ್ಲಿ ಸೋಂಕು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ಇಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್, ಒಳಾಂಗಣ ನಡೆಯುವ ಮದುವೆ, ಸಭೆ, ಸಮಾರಂಭಗಳಲ್ಲಿ ನೂರಕ್ಕಿಂತ ಅಧಿಕ ಜನ ಸೇರುವಂತಿಲ್ಲ. ಅದೇ ರೀತಿ ಹೊರಗಡೆ ನಡೆಯುವ ಕಾರ್ಯಕ್ರಮಗಳಲ್ಲಿ 200 ಜನಕ್ಕೆ ಸೀಮಿತಗೊಳಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರ ಕೈಗೊಂಡ ಕ್ರಮಗಳು:

* ಕನಿಷ್ಠ 3 ಸಾವಿರ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳಲ್ಲಿ ಒಂದು ಸಾವಿರ ಬೆಡ್, ಖಾಸಗಿ 4300 ಬೆಡ್​ ಸೇರಿ ಈ ವರ್ಷ ಒಟ್ಟು ಐದು ಸಾವಿರ ಬೆಡ್ ಮೀಸಲಿಡಬೇಕೆಂದು ತೀರ್ಮಾನ ಮಾಡಲಾಗಿದೆ.

* ಶೇ.50ರಷ್ಟು ಹಾಸಿಗೆಗಳನ್ನ ರೋಗಿಗಳಿಗೆ ಮೀಸಲಿಡಬೇಕು.

* ಐಪಿಎಸ್ ಅಧಿಕಾರಿಗಳು, ನೋಡೆಲ್ ಅಧಿಕಾರಿಗಳು ದಿನದ 24 ಗಂಟೆ ಇರುತ್ತಾರೆ. ಒಂದೊಂದು ದೊಡ್ಡ ಆಸ್ಪತ್ರೆಗಳಲ್ಲಿ ಅಧಿಕಾರಿಗಳ ನಿಯೋಜನೆ ಮಾಡಲಾಗುತ್ತದೆ.

* ಪ್ರತಿಯೊಂದು ವಾರ್ಡ್​​ನಲ್ಲಿ ಹೆಚ್ಚುವರಿ ಆಂಬುಲೆನ್ಸ್ ಒದಗಿಸಲಾಗುತ್ತದೆ.

* ಸಾವಿನಲ್ಲೂ ಹಣ ವಸೂಲಿ ಮಾಡಲಾಗ್ತಿದೆ ಎಂಬ ಆರೋಪ ಬಂದಿವೆ. ಹೀಗಾಗಿ 49 ಶ್ರದ್ಧಾಂಜಲಿ ಆ್ಯಂಬುಲೆನ್ಸ್​ ಇರಲಿದೆ. ಇವು ಉಚಿತ ಆ್ಯಂಬುಲೆನ್ಸ್​​ಗಳು. ಯಾವುದೇ ಹಣವನ್ನು ಕಟ್ಟುವ ಹಾಗಿಲ್ಲ. ಚಿಕಿತ್ಸೆಯನ್ನು ಉಚಿತ ಮಾಡಲಾಗಿದೆ.

* ಆಕ್ಸಿಜನ್ ಘಟಕಗಳ ಸ್ಥಾಪನೆ ಮಾಡಲಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಟೆಂಡರ್ ಕರೆಯಲಿದ್ದೇವೆ. ಅಲ್ಲೂ ಆಕ್ಸಿಜನ್ ಘಟಕ ತೆರೆಯಲಾಗುವುದು. 5 ಸಾವಿರ ಆಕ್ಸಿಜನ್ ಸಿಲಿಂಡರ್​ಗಳಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುತ್ತಿದೆ. ಕಮರ್ಷಿಯಲ್ ಆಕ್ಸಿಜನ್ ಪಡೆಯಲು ಒಡಂಬಡಿಕೆ ಮಾಡಲಾಗಿದೆ.

* ಕಾಂಟ್ಯಾಕ್ಟ್ ಟ್ರೇಸಿಂಗ್ ಹೆಚ್ಚಿಸುವುದು. ಶೀಘ್ರದಲ್ಲೇ ಪರೀಕ್ಷೆ ನಡೆಸುವ ಬಗ್ಗೆಯೂ ತೀರ್ಮಾನ ಮಾಡಲಾಗಿದೆ.

* ಮೈಕ್ರೋ ಕಂಟೈನ್ಮೆಂಟ್ ಮಾಡುವುದು, ಅನಗತ್ಯ ಗುಂಪು ಸೇರುವುದು ನಿಷೇಧಿಸುವ ಬಗ್ಗೆ ತೀರ್ಮಾನಿಸಲಾಗಿದೆ.