ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದ 1,700ಕ್ಕೂ ಅಧಿಕ ಮಂದಿಗೆ ಕೋವಿಡ್‌ ಪಾಸಿಟಿವ್‌

ಡೆಹ್ರಾಡೂನ್: ಕುಂಭ ಮೇಳ ಉತ್ಸವದಲ್ಲಿ ಪಾಲ್ಗೊಂಡಿದ್ದ 1,700ಕ್ಕೂ ಅಧಿಕ ಮಂದಿಗೆ ಕೋವಿಡ್‌ ಪಾಸಿಟಿವ್‌ ಬಂದಿದ್ದು, ಇದು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಏಪಿಲ್‌ 10ರಿಂದ 14ರವರೆಗೆ ಒಟ್ಟು 1,701 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ಈ ಉತ್ಸವದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಉತ್ಸವದಲ್ಲಿ ಪಾಲ್ಗೊಂಡಿದ್ದ ಲಕ್ಷಾಂತರ ಜನರು ಮಾಸ್ಕ್‌ ಧರಿಸದೆ, ಅಂತರವಿಲ್ಲದೆ, ಒಟ್ಟಿಗೆ ನದಿಯಲ್ಲಿ ಸ್ನಾನ ಮಾಡಿರುವುದು ಹಾಗೂ ಸಾಲುಗಟ್ಟಿರುವುದು ಸೋಂಕು ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ.

ಕುಂಭ ಮೇಳ ನಡೆದ ಹರಿದ್ವಾರ, ಡೆಹ್ರಾಡೂನ್‌, ರಿಷಿಕೇಶ ವ್ಯಾಪ್ತಿಯಲ್ಲಿ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಆರ್‌ಟಿ–ಪಿಸಿಆರ್‌ ಪರೀಕ್ಷೆ ನಡೆಸುವಂತೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ.
.