90 ರ ದಶಕ ಟೆನ್ನಿಸ್ ಬಾಲ್ ಕ್ರಿಕೆಟ್ ನ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ ಅಂದಿನಿಂದ ಮೊದಲ್ಗೊಂಡು ಇಂದಿನ ವರೆಗೆ ಸತತ ಮೂರು ದಶಕಗಳ ಕಾಲ ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಟೆನ್ನಿಸ್ ಬಾಲ್ ವೀಕ್ಷಕ ವಿವರಣೆಗೆ ಚುರುಕು ಮುಟ್ಟಿಸಿ, ಹಲವಾರು ರೋಚಕ, ರೋಮಾಂಚಕಾರಿ ಪಂದ್ಯಾಟಗಳಲ್ಲಿ ವೀಕ್ಷಕ ವಿವರಣೆಯ ಚುಕ್ಕಾಣಿ ಹಿಡಿದು ವಿದೇಶದಲ್ಲಿ(ಅಂಪಾಯರಿಂಗ್)ನಲ್ಲಿ ಪ್ರಸಿದ್ದಿ ಪಡೆದ ಕರ್ನಾಟಕ ರಾಜ್ಯದ ಏಕಮಾತ್ರ ವೀಕ್ಷಕ ವಿವರಣೆಕಾರ, ಕ್ರಿಕೆಟ್ ವಿಶ್ಲೇಷಕ, ಕರ್ನಾಟಕದ ಹರ್ಷ ಭೋಗ್ಲೆ ನಮ್ಮೂರಿನ ಹೆಮ್ಮೆಯ ಶಿವನಾರಾಯಣ ಐತಾಳ್ ಕೋಟ.
ಪ್ರಾರಂಭದಲ್ಲಿ ಕೋಟ, ಸಾಲಿಗ್ರಾಮ ರೋಟರ್ಯಾಕ್ಟ್ ಸ್ಥಾಪಕ ಕಾರ್ಯದರ್ಶಿಯಾಗಿ 13 ವರ್ಷ, ಸಾಲಿಗ್ರಾಮ ರೋಟರಿ, ಸಾಲಿಗ್ರಾಮ ಜೇಸಿ ಗಳಲ್ಲಿ ಬಹಳಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ಕ್ರಿಕೆಟ್ ನ ನಾನಾ ಪ್ರಾಕಾರಗಳನ್ನು ಆವಿಷ್ಕರಿಸಿದ ರಾಜ್ಯದ ಶ್ರೇಷ್ಠ ತಂಡ ಇಲೆವೆನ್ ಅಪ್ ಕೋಟ ತಂಡದಲ್ಲಿ ಆಫ್ ಸ್ಪಿನ್ ಎಸೆತಗಾರನಾಗಿ, ಮಧ್ಯಮ ಕ್ರಮಾಂಕದ ದಾಂಡಿಗನಾಗಿಯೂ ಹಾಗೂ ಶ್ರೇಷ್ಠ ಫೀಲ್ಡರ್ ಆಗಿ ಗುರುತಿಸಿಕೊಂಡಿದ್ದರು. ದಿಲ್ಷನ್ ಪ್ರಯೋಗಿಸುತ್ತಿದ್ದ ದಿಲ್ಸ್ಕೂಪ್ ಹೊಡೆತಗಳನ್ನು ಐತಾಳರು(ಶಿವಸ್ಕೂಪ್)ಅಂದಿನ ದಿನಗಳಲ್ಲೇ ಟೆನ್ನಿಸ್ ಬಾಲ್ ನಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದರು.
ಇಲೆವೆನ್ ಅಪ್ ತಂಡವು ರಾಜ್ಯಕ್ಕೆ ಮೊತ್ತಮೊದಲ ಬಾರಿಗೆ ಪರಿಚಯಿಸಿದ್ದ ಮೂವತ್ತು ಗಜಗಳ ಪಂದ್ಯ, ಐ.ಪಿ.ಎಲ್ ಮಾದರಿಯ ಕೆ.ಪಿ.ಎಲ್ ಹಾಗೂ ಕಳೆದ ವರ್ಷ ನಡೆದ ರಾಷ್ಟ್ರ ಮಟ್ಟದ ಟೆನ್ನಿಸ್ ಬಾಲ್ ಪಂದ್ಯಾಟದಲ್ಲಿ ವೀಕ್ಷಕ ವಿವರಣೆಯ ನೇತೃತ್ವ ವಹಿಸಿ
ಅತ್ಯುತ್ತಮವಾಗಿ ಪಂದ್ಯಾಕೂಟವನ್ನು ಸಂಘಟಿಸಿದ ಸಂಘಟನಾ ಚತುರ.
ಅಂತೆಯೇ 90 ದಶಕದ ಆದಿಯಲ್ಲಿ ಪಾರಂಪಳ್ಳಿ ಕ್ರಿಕೆಟರ್ಸ್ ತಂಡ ವಿವೇಕ ಹೈಸ್ಕೂಲ್ ಕೋಟದ ಅಂಗಳದಲ್ಲಿ ಏರ್ಪಡಿಸಿದ್ದ ಡಬಲ್ ವಿಕೆಟ್ ಪಂದ್ಯಾಟದಲ್ಲಿ ವೀಕ್ಷಕ ವಿವರಣೆ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದರು.ಮುಂದಿನ ದಿನಗಳಲ್ಲಿ ಕುಂದಾಪುರದ ಶ್ರೇಷ್ಠ ತಂಡಗಳಾದ ಟಾರ್ಪಡೋಸ್, ಚಕ್ರವರ್ತಿ ತಂಡಗಳು ಗಾಂಧಿ ಮೈದಾನದಲ್ಲಿ ಸಂಘಟಿಸಿದ್ದ ಪಂದ್ಯಾಟಗಳು, ಮೊಟ್ಟ ಮೊದಲ ಬಾರಿಗೆ ಟೆನ್ನಿಸ್ ಬಾಲ್ ಗೆ ವೈಭವದ ಸ್ಪರ್ಶ ನೀಡಿದ ರಾಜ್ಯದ ಪ್ರತಿಷ್ಟಿತ ಪಡುಬಿದ್ರಿ ತಂಡದ ಎಲ್ಲಾ ಪಂದ್ಯಾಕೂಟಗಳು, ಟೆನ್ನಿಸ್ ಕ್ರಿಕೆಟ್ ನಲ್ಲಿ ಸುವರ್ಣ ಇತಿಹಾಸ ಬರೆದ ಜೈ ಕರ್ನಾಟಕ ಬೆಂಗಳೂರು ಸಂಘಟಿಸಿದ್ದ ವ್ಯವಸ್ಥಿತ ಹಣಾಹಣಿಗಳು, ತುಮಕೂರು, ಹಾಸನ, ಶಿವಮೊಗ್ಗ, ಹುಬ್ಬಳ್ಳಿ , ಧಾರವಾಡ ಹೀಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ತನ್ನ ಚುರುಕು ಮಾತಿನ ಕನ್ನಡ ವೀಕ್ಷಕ ವಿವರಣೆ ಹಾಗೂ ಟೆನ್ನಿಸ್ ಬಾಲ್ ನ ಹಿಂದಿನ ದಾಖಲೆಗಳನ್ನು ನೆನಪಿಸಿ, ವಿಶಿಷ್ಟ ಆಟಗಾರರನ್ನು ಅಂತರಾಷ್ಟ್ರೀಯ ಆಟಗಾರನೊಂದಿಗೆ ಹೋಲಿಸಬಲ್ಲ ಸಮರ್ಥ ವೀಕ್ಷಕ ವಿವರಣೆಕಾರನಾಗಿ ನಡುವಿನಲ್ಲಿ ನಗೆ ಚಟಾಕಿ ಹಾರಿಸುವ ಮೂಲಕ ರಾಜ್ಯಾದ್ಯಂತ ಮನೆಮಾತಾಗಿದ್ದಾರೆ. ಹಿರಿಯ ವೀಕ್ಷಕ ವಿವರಣೆಕಾರನಾಗಿ ರಾಜ್ಯ ಟೆನ್ನಿಸ್ ಕ್ರಿಕೆಟ್ ಗೆ ಯುವ ಕಾಮೆಂಟೇಟರ್ ಗಳನ್ನು ತನ್ನ ಗರಡಿಯಲ್ಲಿ ಪಳಗಿಸಿರುತ್ತಾರೆ.
ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಮಂಗಳೂರು ಪ್ರಿಮಿಯರ್ ಲೀಗ್ (M.P.L), ಕೋಸ್ಟಲ್ ವುಡ್ ಪ್ರಿಮಿಯರ್ ಲೀಗ್(C.P.L) ನ ವೀಕ್ಷಕ ವಿವರಣೆಯ ನೇತ್ರತ್ವವನ್ನು ವಹಿಸುತ್ತಿದ್ದಾರೆ.ಐ.ಪಿ.ಎಲ್ ಮಾದರಿಯ ಆಕ್ಷನ್ ಗಳನ್ನು ನಡೆಸುವ ಹಾಗೂ ಕರ್ನಾಟಕದ ರಣಜಿ ಆಟಗಾರರು ಪ್ರತಿನಿಧಿಸುವ ಪಂದ್ಯಾಟಗಳಿಗೂ ವೀಕ್ಷಕ ವಿವರಣೆ ನೀಡಿದವರು ರಾಜ್ಯದ ಏಕಮಾತ್ರ ವ್ಯಕ್ತಿ ಶಿವ ನಾರಾಯಣ್ ಐತಾಳರು.
2000 ರಲ್ಲಿ ಕೆ.ಎಸ್.ಸಿ.ಎ ಅಂಪಾಯರಿಂಗ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಲೆದರ್ ಬಾಲ್ ಲೀಗ್ ಪಂದ್ಯಾಟಗಳಲ್ಲಿ ಉಡುಪಿ ಜಿಲ್ಲೆಯ ಅತಿ ಹಿರಿಯ ಅಂಗೀಕೃತ ಅಂಪಾಯರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವರ್ಷ ದುಬೈನಲ್ಲಿ ನಡೆದ ಅರಬ್ ಪ್ರಿಮಿಯರ್ ಲೀಗ್ ನಲ್ಲಿ ರಾಜ್ಯದ ಏಕೈಕ ಅಂಪಾಯರ್ ಆಗಿಯೂ ಕಾರ್ಯ ನಿರ್ವಹಿಸಿರುತ್ತಾರೆ. ಉದಯ ಟಿ.ವಿ, ಜನಶ್ರೀ ಹಾಗೂ ಇನ್ನಿತರ ಟಿ.ವಿ ಚಾನೆಲ್ ಗಳಲ್ಲಿ ನೇರ ಪ್ರಸಾರದ ಪಂದ್ಯಗಳ ವಿಶ್ಲೇಷಕನಾಗಿ 200 ಕ್ಕೂ ಹೆಚ್ಚಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಟೆನ್ನಿಸ್ ಬಾಲ್ ನ ವಿಶಿಷ್ಟ ಸಾಧಕ. ಈಗಾಗೇ ನೂರಾರು ಸಂಘ ಸಂಸ್ಥೆಗಳಿಂದ ಐತಾಳರು ಸನ್ಮಾನಿಸಲ್ಪಟ್ಟಿರುತ್ತಾರೆ.
ತಂದೆಯಂತೆಯೇ ಮಗನು ಕೂಡ ಈಗಾಗಲೇ ಹಿಂದಿ, ಇಂಗ್ಲೀಷ್ ಕಾಮೆಂಟ್ರಿ ಕರಗತಗೊಳಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಶ್ರೇಷ್ಠ ವೀಕ್ಷಕ ವಿವರಣೆಕಾರನಾಗಿ ಗುರುತಿಸಿಕೊಳ್ಳುವ ಎಲ್ಲಾ ಲಕ್ಷಣಗಳನ್ನು ತೋರಿದ್ದಾನೆ.
ಐತಾಳರು ಭವಿಷ್ಯದಲ್ಲಿ ಲೆದರ್ ಬಾಲ್ ಕೋಚಿಂಗ್ ಅಕಾಡೆಮಿ ಸ್ಥಾಪಿಸಿ,ತರಬೇತಿ ನೀಡುವ ಮೂಲಕ ಯುವ ಪ್ರತಿಭೆಗಳನ್ನು ರಾಜ್ಯ, ರಾಷ್ಟ್ರಕ್ಕೆ ಪರಿಚಯಿಸುವ ಇರಾದೆ ಹೊಂದಿದ್ದು ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.
-ಕೋಟ ರಾಮಕೃಷ್ಣ ಆಚಾರ್ಯ