ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ: ಮುಂದುವರಿದ ಖಾಸಗಿ‌ ಬಸ್ ಗಳ ಸಂಚಾರ, ತಪ್ಪದ ಪ್ರಯಾಣಿಕರ ಪರದಾಟ

ಬೆಂಗಳೂರು: ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಬಹುತೇಕ ಪ್ರಯಾಣಿಕರು ಇಂದು ಕೂಡ ಪರದಾಟ ನಡೆಸುತ್ತಿದ್ದಾರೆ.

ಸರ್ಕಾರ ಖಾಸಗಿ ಬಸ್ ಗಳನ್ನು ರೋಡ್ ಗೆ ಇಳಿಸಿ ನೌಕರರಿಗೆ ಸೆಡ್ಡು ಹೊಡೆಯಲು ಪ್ರಯತ್ನಿಸಿದರೆ, ಇತ್ತ ಸಾರಿಗೆ ನೌಕರರೂ ಪಟ್ಟು ಬಿಡದೆ ಮುಷ್ಕರ ಮುಂದುವರಿಸಿದ್ದಾರೆ.

ಒಂದೆಡೆ ಅನಿರ್ದಿಷ್ಟಾವಧಿ ಖಾಸಗಿ ವಾಹನಗಳ ಕಾರ್ಯಾಚರಣೆಗೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತ್ತೂಂದೆಡೆ ನೌಕರರನ್ನು ಮಣಿಸಲು ಒಂದೊಂದೇ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಅಲ್ಲದೆ, ತರಬೇತಿಯಲ್ಲಿ ಇರುವ ಚಾಲಕರು, ನಿರ್ವಾಹಕರನ್ನು ಬಳಸಿಕೊಂಡು ಬಸ್ ಆರಂಭಿಸಲು ತೀರ್ಮಾನಿಸಿದೆ.‌

ಕರಾವಳಿಗೆ ತಟ್ಟದ ಬಂದ್ ಬಿಸಿ: ಖಾಸಗಿ ಬಸ್ ಗಳೇ ಹೆಚ್ಚಾಗಿ ಓಡಾಡುವ ಕರಾವಳಿ ಜಿಲ್ಲೆಗಳಲ್ಲಿ ಸಾರಿಗೆ ನೌಕರರ ಮುಷ್ಕರದ ಬಿಸಿ ಅಷ್ಟಾಗಿ ತಟ್ಟಿಲ್ಲ. ಬುಧವಾರ ಹೊರಜಿಲ್ಲೆಗಳಿಗೆ ಹೋಗುವ ಕೆಲ ಪ್ರಯಾಣಿಕರು ಪರದಾಡಿದರೂ, ಖಾಸಗಿ ಬಸ್ ಗಳನ್ನು ಬಳಸಿದ್ದರಿಂದ ದೊಡ್ಡ ಮಟ್ಟದ ತೊಂದರೆ ಸಂಭವಿಸಿಲ್ಲ. ಇಂದು ಕೂಡ ಸರ್ಕಾರಿ ಬಸ್ ಗಳು ರಸ್ತೆಗಿಳಿದಿಲ್ಲ. ಇದರಿಂದ ಖಾಸಗಿ ಬಸ್ ಗಳು‌ ತಮ್ಮ ಸಂಚಾರವನ್ನು ಮುಂದುವರಿಸಿವೆ.