ಬಡ್ಡಿ ದರ: ಯಥಾಸ್ಥಿತಿ ಕಾಯ್ದುಕೊಂಡ ಆರ್ ಬಿಐ

ಮುಂಬೈ: ನಿರೀಕ್ಷೆಯಂತೆ ಆರ್‌ಬಿಐ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದೇ, ಯಥಾಸ್ಥಿತಿ ಕಾಯ್ದುಕೊಂಡಿದೆ.

ಇಂದು ಮುಂಬೈಯಲ್ಲಿ 2021-22ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕದ ವಿತ್ತೀಯ ನೀತಿ ಪ್ರಕಟಿಸಿದ್ದು, ರೆಪೊ ದರವನ್ನು ಶೇಕಡಾ 4ರಷ್ಟು ಹಾಗೂ ರಿವರ್ಸ್ ರೆಪೊ ದರವನ್ನು ಶೇಕಡಾ 3.35ರಷ್ಟು ಯಥಾಸ್ಥಿತಿ ಕಾಯ್ದುಕೊಂಡಿದೆ.

ಆರ್ಥಿಕ ಬೆಳವಣಿಗೆಯ ದರವನ್ನು ಕೂಡ ಬದಲಾಯಿಸದೆ ಶೇಕಡಾ 10.5ರಷ್ಟು ಹಣಕಾಸು ವರ್ಷ 2021-22ರಲ್ಲಿ ಇರಬಹುದು ಎಂದು ಕೂಡ ಅಂದಾಜಿಸಿದೆ.

ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಆರ್‌ಬಿಐ ಬಡ್ಡಿದರಗಳನ್ನು ಸಹಜ ಸ್ಥಿತಿಗೆ ಬರುವವರೆಗೆ ತಡೆಹಿಡಿಯುತ್ತದೆ ಎಂದು ಇಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಆರು ಸದಸ್ಯರ ಹಣಕಾಸು ವಿತ್ತೀಯ ನೀತಿಯ ಮೂರು ದಿನಗಳ ಸಭೆ ಮುಗಿದ ಬಳಿಕ ಇಂದು ಬೆಳಗ್ಗೆ ಹೇಳಿದರು.

ರೆಪೊ ದರ ಎಂದರೇನು.?:
ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೊ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ.

ರಿವರ್ಸ್ ರೆಪೊ ದರ: 
ಇದಕ್ಕೆ ಪ್ರತಿಯಾಗಿ ಆರ್‌ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.