ಉಡುಪಿ: ನಗರದ ಕಲ್ಸಂಕ ಬಳಿ ಹಾದು ಹೋಗುವ ಇಂದ್ರಾಣಿ ನದಿಯಲ್ಲಿ ತ್ಯಾಜ್ಯ ತುಂಬಿದ ಕಲುಷಿತ ನೀರು ಬಿಡುತ್ತಿದ್ದು, ಪರಿಸರದಲ್ಲಿ ಗಬ್ಬು ವಾಸನೆ ಹಬ್ಬಿದೆ. ಇದರಿಂದ ಸಾಂಕ್ರಮಿಕ ರೋಗ ಹರಡುವ ಭೀತಿಯೂ ಎದುರಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.
ಪವಿತ್ರ ಇಂದ್ರಾಣಿ ನದಿಯ ಉಳುವಿಗಾಗಿ ಪರಿಸರವಾದಿಗಳು, ಸಂಘ ಸಂಸ್ಥೆಗಳು ಹೋರಾಟ ಮಾಡುತ್ತಿವೆ. ಆದರೂ ಆಡಳಿತ ವ್ಯವಸ್ಥೆಗಳು ಎಚ್ಚೆತ್ತುಕೊಂಡಿಲ್ಲ. ಜಲ ಮೂಲವನ್ನು ರಕ್ಷಿಸಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿವೆ ಎಂದು ಅವರು ದೂರಿದ್ದಾರೆ.
ತಕ್ಷಣ ನಗರಾಡಳಿತವು ಈ ವಿಷಕಾರಿ ತ್ಯಾಜ್ಯ ನೀರು ನದಿಗೆ ಬಿಡುವುದನ್ನು ನಿಲ್ಲಿಸಬೇಕು. ಆ ಮೂಲಕ ಪರಿಸರವನ್ನು ರಕ್ಷಿಸಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ಕೆ.ಬಾಲಗಂಗಾಧರ ರಾವ್, ನಿತ್ಯಾ ನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.