ಬೆಂಗಳೂರು: ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಗುರುವಾರ (ಎ.1)ದಿಂದ ₹10ರಷ್ಟು ಇಳಿಕೆಯಾಗಲಿದೆ.
ಈ ಬಗ್ಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಮಾಹಿತಿ ನೀಡಿದ್ದು, ಅದರಂತೆ 14.2 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ ₹ 822 ಇದ್ದಿದ್ದು, ₹ 812ಕ್ಕೆ ಇಳಿಕೆಯಾಗಲಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿಕೆ ಆಗಿರುವುದರಿಂದ ಎಲ್ಜಿಪಿ ದರದಲ್ಲಿಯೂ ಇಳಿಕೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಕಳೆದ ಕೆಲ ವಾರಗಳ ಹಿಂದೆ ಸಿಲಿಂಡರ್ ಬೆಲೆಯಲ್ಲಿ ಒಟ್ಟಾರೆ ₹125 ಏರಿಕೆಯಾಗಿತ್ತು. ಪೆಟ್ರೋಲ್ ಮತ್ತು ಡೀಸೆಲ್ ದರ ದಿನವೂ ಪರಿಷ್ಕರಣೆಯಾಗುತ್ತಿದ್ದರೆ, ಎಲ್ಪಿಜಿ ದರ ಪ್ರತಿ ತಿಂಗಳ ಮೊದಲ ದಿನವೇ ಪರಿಷ್ಕರಣೆಯಾಗುತ್ತದೆ.