ಬೆಂಗಳೂರು: ಸಿಡಿ ಪ್ರಕರಣ ಕ್ಷಣ ಕ್ಷಣಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇಂದು (ಶನಿವಾರ) ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಹಾಗೂ ಸಿಡಿಲೇಡಿಯ ಪೋಷಕರು ವಾಗ್ದಾಳಿ ನಡೆಸಿದ ಬೆನ್ನಲ್ಲೆ ಯುವತಿಯಿಂದ ಮತ್ತೊಂದು ವಿಡಿಯೋ (5ನೇ) ರಿಲೀಸ್ ಆಗಿದೆ.
ಇಂದಿನ ಬೆಳವಣಿಗೆಯಿಂದ ಭಯ ಆಗ್ತಿದೆ. ನಮ್ಮ ಅಪ್ಪ-ಅಮ್ಮನಿಗೆ ಏನು ಗೊತ್ತಿಲ್ಲ. ಪ್ರಕರಣವನ್ನು ಬೇರೆ ಕಡೆ ತಿರುಗಿಸುತ್ತಿದ್ದಾರೆ. ನಮ್ಮವರನ್ನು ಬ್ಲಾಕ್ಮೇಲ್ ಮಾಡಲಾಗಿದೆ ಎಂದು ಯುವತಿ ಹೇಳಿಕೊಂಡಿದ್ದಾಳೆ.
ಮಗಳನ್ನು ಡಿ.ಕೆ. ಶಿವಕುಮಾರ್ ಒತ್ತೆಯಾಳಾಗಿಟ್ಟುಕೊಂಡಿದ್ದಾರೆ ಎಂದು ಪೋಷಕರ ಹೇಳಿಕೆಯ ಬೆನ್ನಲ್ಲೇ ಯುವತಿ ವಿಡಿಯೋ ಹರಿಬಿಟ್ಟಿದ್ದಾಳೆ. ತಂದೆ, ತಾಯಿಯ ಮೇಲೆ ಪ್ರಭಾವ ಬೀರಿ ಹೇಳಿಕೆ ಪಡೆಯಲಾಗಿದೆ. ನಿಜವಾಗಿಯೂ ಅನ್ಯಾಯವಾಗಿರುವುದು ನನಗೆ ಎಂದು ಯುವತಿ ಸ್ಫೋಟಕ ಹೇಳಿಕೆ ಕೊಟ್ಟಿದ್ದಾಳೆ.
ನನಗೆ ನ್ಯಾಯ ಸಿಗಬೇಕು. ನನ್ನ ಅಪ್ಪ, ಅಮ್ಮನಿಗೆ ಇದರ ಬಗ್ಗೆ ಏನು ಗೊತ್ತಿಲ್ಲ. ಅವರನ್ನು ಕರೆಸಿ ವಿಚಾರಣೆ ಮಾಡುವಂತಹುದು ಏನಿತ್ತು? ಎಂದು ಆಕೆ ಪ್ರಶ್ನಿಸಿದ್ದಾಳೆ.
ಇದುವರೆಗೆ ಎಸ್ಐಟಿ ಎದುರು ಹಾಜರಾಗುವುದಾಗಿ ಹೇಳುತ್ತಾ ಬಂದಿದ್ದ ಯುವತಿ ಇದೀಗ ಯೂಟರ್ನ್ ಹೊಡೆದಿದ್ದು, ನಾನು ನೇರವಾಗಿ ನ್ಯಾಯಾಧೀಶರ ಎದುರು ಹೇಳಿಕೆ ನೀಡುತ್ತೇನೆ ಎಂದಿದ್ದಾಳೆ. ಇದಕ್ಕೆ ಅವಕಾಶ ಮಾಡಿಕೊಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವರು, ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾಳೆ.