ಬೆಂಗಳೂರು: ಚಿತ್ರನಟ ಯಶ್ ಹಾಸನ ಜಿಲ್ಲೆಯ ದುದ್ದ ಹೋಬಳಿಗೆ ಸೇರಿದ ತಿಮ್ಮಲಾಪುರ ಗ್ರಾಮದಲ್ಲಿ ಖರೀದಿಸಿರುವ ಜಮೀನಿನ ವಿವಾದ ತಾರಕಕ್ಕೇರಿದ್ದು, ಯಶ್ ವಿರುದ್ಧ ಸಿಡಿದೆದ್ದಿರುವ ರೈತರ ಸಂಘವು ಶನಿವಾರ ಹಾಸನ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆ.
ಜಮೀನಿಗೆ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಪೋಷಕರು ಮತ್ತು ಗ್ರಾಮಸ್ಥರ ನಡುವೆ ಘರ್ಷಣೆ ನಡೆದಿತ್ತು.
ಗಲಾಟೆಗೆ ಸಂಬಂಧಿಸಿದಂತೆ ನಟ ಯಶ್ ಕುಟುಂಬ ದುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಇದರ ಬೆನ್ನಲ್ಲೇ ಯಶ್ ವಿರುದ್ಧ ರೈತ ಸಂಘ ಕೂಡ ದೂರು ದಾಖಲಿಸಿದೆ. ರೈತರಿಗಾಗಿ ಏನನ್ನಾದರೂ ಮಾಡುತ್ತೇನೆ. ಜಮೀನು ಬೇಕಾದರೂ ಬಿಟ್ಟುಕೊಡುತ್ತೇನೆ ಎಂದಿದ್ದ ಯಶ್, ಇದೀಗ ಏಕಾಏಕಿ ಕಾಂಪೌಂಡ್ ನಿರ್ಮಿಸಿ ರೈತರು ಸಂಚರಿಸುವ ದಾರಿಯನ್ನೇ ಮುಚ್ಚಿದ್ದಾರೆ. ದಾರಿ ಬಿಡುವಂತೆ ಮನವಿ ಮಾಡಿದರೂ ಒಪ್ಪಿಲ್ಲ. ಅಲ್ಲದೆ ಬಾಡಿಗೆ ಗೂಂಡಾಗಳನ್ನು ಬಿಟ್ಟು ಗ್ರಾಮಸ್ಥರ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾರೆ ಎಂದು ರೈತ ಮುಖಂಡ ಅಣ್ಣಾಜಪ್ಪ ಗಂಭೀರ ಆರೋಪ ಮಾಡಿದ್ದಾರೆ.