ಕೋವಿಡ್ ಸಂದರ್ಭದಲ್ಲಿ ಕೌಟುಂಬಿಕ ಹಿಂಸೆಗಳು ಶೇ. 100ರಷ್ಟು ಹೆಚ್ಚಾಗಿವೆ: ನ್ಯಾಯಾಧೀಶೆ ಕಾವೇರಿ ಕಳವಳ

ಉಡುಪಿ: ಕೋವಿಡ್ ಸಂದರ್ಭದಲ್ಲಿ ಕೌಟಂಬಿಕ ಹಿಂಸೆಗಳು ಹಾಗೂ ವಿವಾಹ ವಿಚ್ಛೇದನಗಳು ಪ್ರಕರಣಗಳು ಶೇ. 100ರಷ್ಟು ಹೆಚ್ಚಳವಾಗಿವೆ ಎಂದು ಉಡುಪಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್ ಹಮ್ಮಿ ಕೊಂಡಿರುವ ‘ಸುದೃಢ ಕುಟುಂಬ, ಸುಭದ್ರ ಸಮಾಜ’ ವೆಂಬ ಅಭಿಯಾನದ ಅಂಗವಾಗಿ ಸ್ಥಾನೀಯ ಜಮಾಅತ್ ಇಂದು ಆಯೋಜಿಸಿದ್ದ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು.

ಸಂಘಟನೆ, ಸಾಮೂಹಿಕ ಜೀವನ ಎಲ್ಲಾ ಜೀವಿಗಳಲ್ಲಿ ಕಾಣಬಹುದು, ನಾವು ಮಾನವರು ಪಡಕೊಂಡ ಒಳ್ಳೆಯ ಸಂಸ್ಕ್ರತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು. ನಮ್ಮ ಜವಾಬ್ದಾರಿಗಳನ್ನು ಅರಿಯಬೇಕು. ಕೇವಲ ಆಕಾಂಕ್ಷೆ ಸಾಲದು, ಶ್ರಮ ಬೇಕು, ಶಿಸ್ತಿಗೆ ಆದ್ಯತೆ ವಿರಬೇಕು. ಇನ್ನೊಬ್ಬರಿಗಾಗಿ ಪ್ರೀತಿ ಮತ್ತು ಕರುಣೆ ವಿಶ್ವಾಸ. ಒಳ್ಳೆಯ ಅರಿವು ಮತ್ತು ಸಂಯಮ ತ್ಯಾಗಗಳಿದ್ದರೆ, ಆದರ್ಶ ಕುಟುಂಬವಾಗಲು ಸಾಧ್ಯ. ಮೋಕ್ಷದ ಗುರಿಗಾಗಿ ಪರಸ್ಪರ ಬೆಂಬಲವಿದ್ದರೆ ಆರೋಪ ಪ್ರತ್ಯಾರೋಪ ಮಾಡದೆ, ಅತ್ಯಂತ ಸಂಯದಿಂದ ವಾತಾವರಣವನ್ನು ನಿಯಂತ್ರಿಸಬಹುದು. ಮಗು ಭವಿಶ್ಯದ ಕುಟುಂಬವೆಂಬ ಅರಿವುಬೇಕು ಎಂದರು.

ವೈವಾಹಿಕ ಜೀವನವು ವ್ಯಾಪಕವಾಗಿ ವಿಫಲವಾಗುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಧಾರ್ಮಿಕ ಮೌಲ್ಯಗಳತ್ತ ಮರಳಬೇಕಾಗಿದೆ ಎಂದು ವಕೀಲ ಆತ್ರಾಡಿ ಪೃಥ್ವಿರಾಜ್ ಹೆಗ್ಡೆ ಹೇಳಿದರು.

ಜನರು ವಿವಿಧ ವಿಷಯಗಳಿಗಾಗಿ ಹೋರಾಡುತ್ತಿದ್ದಾರೆ, ಆದರೆ ಜಮಾಅತೆ ಇಸ್ಲಾಮಿ ಸುಧೃಢ ಕುಟುಂಬ, ಸುಭದ್ರ ಸಮಾಜಕ್ಕಾಗಿ ರಾಷ್ಟ್ರಾದ್ಯಾಂತ ಅಭಿಯಾನವನ್ನೇ ಆರಂಭಿಸಿರುವುದು ಅಭಿನಂದಾರ್ಹವೆಂದು ಉಡುಪಿ ಜಿಲ್ಲಾ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಚೇತನ್ ಲೋಬೊ ಹೇಳಿದರು.

ಮನೋರೋಗ ತಜ್ಞ ಡಾ. ಪಿ.ವಿ. ಭಂಡಾರಿ ಮಾತನಾಡಿ, ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿಯೆಂದು ಶಿವರಾಮ ಕಾರಂತರು ಹೇಳಿದ್ದರು. ಮಕ್ಕಳ ಮಾನಸಿಕ ಸೂಕ್ಷ್ಮತೆಯನ್ನು ಗಮನಿಸಬೇಕು. ಮನೆಯ ವಾತಾವರಣ ಅತಿ ಪ್ರಮುಖ. ಪ್ರೀತಿಯ, ಅನ್ಯೋನ್ಯತೆ ಅಗತ್ಯವಿದೆ. ಉಪದೇಶವಲ್ಲ, ಮಾದರಿಯಾಗಿ ತೋರಿಸಿ ಎಂದು ಕಿವಿಮಾತು ಹೇಳಿದರು.

ಉಡುಪಿ ಮಹಿಳಾ ಪೊಲಿಸ್ ಸಬ್ ಇನ್ಸ್ ಪೆಕ್ಟರ್ ವೊಯಲೆಟ್ ಫೆಮಿನಾ ಉಪಸ್ಥಿತರಿದ್ದರು. ಜಮಾಅತೆ ಇಸ್ಲಾಮಿ ಕರ್ನಾಟಕ ಘಟಕದ ಕಾರ್ಯದರ್ಶಿ ಮುಹಮ್ಮದ್ ಕುಞ ಅಧ್ಯಕ್ಷತೆ ವಹಿಸಿದ್ದರು.
ನಿಸಾರ್ ಅಹಮದ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.