ಕೊಲ್ಲೂರು ದೇಗುಲದಲ್ಲಿ ಕೋಟ್ಯಾಂತರ ರೂ.ಗಳ ಅವ್ಯವಹಾರ: ದೇವಸ್ಥಾನ-ಧಾರ್ಮಿಕ ಸಂಸ್ಥೆಗಳ ಮಹಾಸಂಘ ಆರೋಪ

ಕೊಲ್ಲೂರು: ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ನಡೆಯುತ್ತಿದ್ದು, ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸರಕಾರಿ ಅಧಿಕಾರಿ ಸೇರಿ ದೇವಳದ ಹಣ, ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಗಂಭೀರ ಆರೋಪ ಮಾಡಿದೆ.

ಮಂಗಳವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ‌ ಬಗ್ಗೆ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವಕ್ತಾರರಾದ ಗುರುಪ್ರಸಾದ್ ಗೌಡ ಮಾಹಿತಿ ನೀಡಿದ್ದು, ದೇವಸ್ಥಾನದಲ್ಲಿ ದೇಣಿಗೆ ರೂಪದಲ್ಲಿ ದೊರೆತ ಬಂಗಾರ ಮತ್ತು ಬೆಳ್ಳಿಯ ಬೆಲೆಬಾಳುವ ಆಭರಣಗಳ ಬಗ್ಗೆ ಆಡಳಿತ ಮಂಡಳಿಯು ನಿಯಮಾನುಸಾರ ನೋಂದಣಿ ಮಾಡಿಲ್ಲ 2018 – 19ರ ವರೆಗಿನ ದೇಣಿಗೆ ರೂಪದಲ್ಲಿ ಪಡೆದ ಆಭರಣಗಳ ಪಟ್ಟಿಯನ್ನು ಸರಕಾರಿ ಲೆಕ್ಕಪರಿಶೋಧಕರಿಗೆ ನೀಡಿಲ್ಲ. ಆಡಳಿತ ಮಂಡಳಿ ಸುಳ್ಳು ಸಿಬ್ಬಂದಿಗಳನ್ನು ತೋರಿಸಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಎಸಗಿದೆ ಎಂದು ದೂರಿದರು.

2018-19ನೇ ಸಾಲಿನಲ್ಲಿ ಉಡುಪಿ ಜಿಲ್ಲಾಧಿಕಾರಿ ನಿವಾಸದ ದೂರವಾಣಿ ಬಿಲ್ ಮೊತ್ತ ₹ 23,363 ಕೂಡ ದೇಗುಲದ ನಿಧಿಯಿಂದಲೇ ಭರಿಸಲಾಗಿದೆ. ಅಲ್ಲದೆ, ಕೆಲ ಸರ್ಕಾರಿ ಸಿಬ್ಬಂದಿಯ ಸಂಬಳ ಮತ್ತು ಭತ್ಯೆಗಳನ್ನೂ ಪಾವತಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಲೂಟಿಕೋರ ಸರಕಾರಿ ಅಧಿಕಾರಿ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಘದ ಸದಸ್ಯರಾದ ಸುನೀಲ್ ಘನವಟ್, ಪ್ರಭಾಕರ ನಾಯಕ್, ಶ್ರೀನಿವಾಸ, ಚಂದ್ರ ಮೊಗೇರ, ಮಧುಸೂದನ ಐಯ್ಯರ್ ಸುದ್ದಿಗೋಷ್ಠಿಯಲ್ಲಿದ್ದರು.